ನರಸಿಂಗ್ ಪುರ: ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಆಸಕ್ತಿ ಹೊಂದಿಲ್ಲ ಎಂದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್ ತನ್ನ ಮುಖ್ಯಸ್ಥರನ್ನು ಆಯ್ಕೆ ಮಾಡಲು ಗುರುವಾರ ಅಧಿಸೂಚನೆ ಹೊರಡಿಸುವ ಮೂಲಕ ಮತದಾನ ದಿನಾಂಕವನ್ನು ಪ್ರಕಟಿಸಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.
ಶಶಿ ತರೂರ್ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಎರಡು ದಶಕಗಳ ನಂತರ ಪಕ್ಷದ ಉನ್ನತ ಹುದ್ದೆಗೆ ಚುನಾವಣೆಯು ಸನ್ನಿಹಿತವಾಗಿದೆ. ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್, ಮುಕುಲ್ ವಾಸ್ನಿಕ್ ಮತ್ತು ಪೃಥ್ವಿರಾಜ್ ಚವಾಣ್ ಅವರ ಹೆಸರುಗಳ ಸಹ ಕೇಳಿಬರುತ್ತಿವೆ. ಆದರೆ ಅವರಲ್ಲಿ ಹಲವರು ಉನ್ನತ ಹುದ್ದೆಗೆ ಸ್ಪರ್ಧಿಸುವುದನ್ನು ತಳ್ಳಿಹಾಕಿದ್ದಾರೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ನಾನು ಈಗಾಗಲೇ ಹೇಳಿದ್ದೇನೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ ಎಂದು ನಾನು ಪುನರುಚ್ಚರಿಸುತ್ತಿದ್ದೇನೆ ಎಂದು ಹೇಳಿದರು. ಒಂದು ವೇಳೆ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷರಾದರೆ ರಾಜಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನಾನು ರಾಜಸ್ಥಾನದ ಸಾರ್ವಜನಿಕ ಪ್ರತಿನಿಧಿಯಲ್ಲ ಎಂದರು.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದೆಹಲಿಯಲ್ಲಿ ಮಸೀದಿಯೊಂದಕ್ಕೆ ಭೇಟಿ ನೀಡಿದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ಇದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಫಲಿತಾಂಶವಾಗಿದೆ. ಭಾರತ್ ಜೋಡೋ ಯಾತ್ರೆಯಿಂದ ಮೋಹನ್ ಭಾಗವತ್ ಪ್ರಭಾವಿತರಾಗಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ದಿಗ್ವಿಜಯ್ ಸಿಂಗ್ ತಿಳಿಸಿದರು.