ಪುಣೆ: ಕೋವಿಡ್-19 ವಿರುದ್ಧದ ಸುರಕ್ಷೆಗಾಗಿ ಎರಡು ಹೊಸ ದೇಸಿ ಲಸಿಕೆಗಳನ್ನು ಬಿಡುಗಡೆ ಮಾಡಲು ಭಾರತ ಮುಂದಾಗಿದೆ ಎಂದು ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಭಾರತದಲ್ಲೇ ಉತ್ಪಾದಿತ ಎರಡು ಹೊಸ ಲಸಿಕೆಗಳು ಕೋವಿನ್‍ನಲ್ಲಿ ಲಭ್ಯವಾಗಲಿದ್ದು, ಈ ಪೈಕಿ ಒಂದು ಎಂಆರ್‌ಎನ್‍ಎ ಶಾಟ್ ಹಾಗೂ ಇನ್ನೊಂದು ಮೂಗಿನ ಮೂಲಕ ನೀಡುವ ಲಸಿಕೆಯಾಗಿರುತ್ತದೆ ಎಂದು ಲಸಿಕೀಕರಣ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.
"ಭಾರತೀಯ ಎಂಆರ್‍ಎನ್‍ಎ ಶಾಟ್ ಈ ವರ್ಗದಲ್ಲಿ ಏಕೈಕ ಲಸಿಕೆಯಾಗಿದ್ದು, ಇದನ್ನು 2-8 ಡಿಗ್ರಿ ಸೆಲ್ಷಿಯಸ್‍ನಲ್ಲಿ ದಾಸ್ತಾನು ಮಾಡಲಾಗುತ್ತದೆ. ಅಂತೆಯೇ ಮೂಗಿನ ಮೂಲಕ ನೀಡುವ ಲಸಿಕೆಯನ್ನು ಅತ್ಯಂತ ಸುಲಭವಾಗಿ ನೀಡಬಹುದಾಗಿದೆ. ಈ ಲಸಿಕೆಗಳನ್ನು ಪ್ರಾಥಮಿಕ ಡೋಸ್‍ಗಳಾಗಿ ನೀಡಬಹುದು. ಸಾಕಷ್ಟು ಅಂಕಿ ಅಂಶಗಳು ಈ ಬಗ್ಗೆ ಲಭ್ಯವಾದ ಬಳಿಕ ಇವುಗಳನ್ನು ಬೂಸ್ಟರ್‍ಗಳಾಗಿಯೂ ನೀಡಬಹುದು" ಎಂದು ಡಾ. ಅರೋರಾ ವಿವರಿಸಿದ್ದಾರೆ.
ಕೋವಿಡ್ ಸಂಬಂಧಿ ಸಾವುಗಳು ಇಂದಿಗೂ ವರದಿಯಾಗುತ್ತಿರುವ ಬಗ್ಗೆ ಗಮನ ಸೆಳೆದಾಗ, ಮೃತಪಡುತ್ತಿರುವ ಕೋವಿಡ್ ರೋಗಿಗಳಲ್ಲಿ ಬಹುತೇಕ ಮಂದಿ ಹೃದ್ರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್ ಮತ್ತು ಶ್ವಾಸಕೋಶ ರೋಗಗಳಂಥ ತೀವ್ರ ಸಹ ಅಸ್ವಸ್ಥತೆಗಳನ್ನು ಹೊಂದಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಎಂದು ಹೇಳಿದರು.
ದೇಶದಲ್ಲಿ ಬೂಸ್ಟರ್ ಡೋಸ್ ನೀಡಿಕೆಯ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಆರು ತಿಂಗಳ ಹಿಂದೆ ಲಸಿಕೆ ಪಡೆದವರು ಆಯಂಟಿಬಾಡಿ ಮಟ್ಟ ಕುಸಿಯುವುದನ್ನು ಸರಿಪಡಿಸಲು ಬೂಸ್ಟರ್ ಡೋಸ್‍ಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ timesofindia.com ವರದಿ ಮಾಡಿದೆ.