ನವದೆಹಲಿ :ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿಶ್ಚಿತ ಠೇವಣಿಗಳ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಕೆಲ ನಿರ್ದಿಷ್ಟ ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವನ್ನು 30 ಮೂಲ ಅಂಶಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಇದು ಮುಂದಿನ ಮೂರು ತಿಂಗಳ ವರೆಗೆ ಜಾರಿಯಲ್ಲಿರುತ್ತದೆ.
ಇದು ಒಂಬತ್ತು ತ್ರೈಮಾಸಿಕಗಳಲ್ಲಿ ಮೊದಲ ಏರಿಕೆಯಾಗಿದೆ. ಸಣ್ಣ ಉಳಿತಾಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಕಿಸಾನ್ ವಿಕಾಸ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಮತ್ತು 2 ರಿಂದ 3 ವರ್ಷ ಅವಧಿಯ ಅಂಚೆ ಕಚೇರಿ ಠೇವಣಿಯನ್ನು ಪರಿಷ್ಕರಿಸಲಾಗಿದೆ.
ದರ ಇಳಿಕೆ ಸಂದರ್ಭದಲ್ಲಿ ಕೂಡಾ ಕೇಂದ್ರ ಸರ್ಕಾರ ಸಣ್ಣ ಉಳಿತಾಯದ ಬಡ್ಡಿಯಲ್ಲಿ ಅಧಿಕ ಹಣದುಬ್ಬರದ ಕಾರಣದಿಂದ ಹಾಗೂ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆರ್‍ಬಿಐ ತನ್ನ ನೀತಿ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದನ್ನು ನೋಡಿಕೊಂಡು ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ವಿತ್ತ ನೀತಿ ಸಮಿತಿಯ ಶುಕ್ರವಾರದ ಸಭೆ ಬಳಿಕ ಆರ್‍ಬಿಐ ನೀತಿ ದರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎರಡರಿಂದ ಮೂರು ವರ್ಷದ ಅಂಚೆ ಕಚೇರಿ ಠೇವಣಿಯ ದರ ಪರಿಷ್ಕರಣೆ ಬಳಿಕ ಇದು ಭಾರತೀಯ ಸ್ಟೇಟ್‍ಬ್ಯಾಂಕ್ ಇದೇ ಅವಧಿಗೆ ನೀಡುವ ಬಡ್ಡಿದರಕ್ಕೆ ಸಮವಾಗಲಿದೆ. ಹಿರಿಯ ನಾಗರಿಕರಿಗೆ ಶೇಕಡ 0.5ರಷ್ಟು ಹೆಚ್ಚಿನ ಬಡ್ಡಿದರ ಸಿಗಲಿದೆ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ದರ ಹೆಚ್ಚಳದ ನಿರೀಕ್ಷೆ ಇರುವುದರಿಂದ ಈ ಹೆಚ್ಚುವರಿ ಲಾಭ ಅಂತ್ಯವಾಗುವ ಸಾಧ್ಯತೆ ಇದೆ. ಈ ಬಗ್ಗೆ timesofindia.com ವರದಿ ಮಾಡಿದೆ.