ನವದೆಹಲಿ: ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಐದು ಫೆಲೋಷಿಪ್ ಮತ್ತು ಸಂಶೋಧನಾ ಅನುದಾನಗಳನ್ನು ಶಿಕ್ಷಕರ ದಿನಾಚರಣೆಯಂದು (ಸೆ.5) ಘೋಷಿಸಲಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದರು.
ಶಿಕ್ಷಕರ ದಿನದಂದು, ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತಹ ಹಲವಾರು ಸಂಶೋಧನಾ ಯೋಜನೆಗಳನ್ನು ಯುಜಿಸಿ ಪ್ರಕಟಿಸಲಿದೆ ಎಂದು ಜಗದೀಶ್ ಕುಮಾರ್ ಭಾನುವಾರ ಹೇಳಿದರು.
ಸೋಮವಾರ ಘೋಷಿಸಲಿರುವ ಐದು ಫೆಲೋಷಿಪ್ ಮತ್ತು ಸಂಶೋಧನಾ ಅನುದಾನಗಳಲ್ಲಿ ಕುಟುಂಬದಲ್ಲಿ ಒಬ್ಬಳೇ ಹೆಣ್ಣು ಮಗಳಾಗಿದ್ದರೆ (ಸಿಂಗಲ್ ಗರ್ಲ್ ಚೈಲ್ಡ್) ಅಂತಹವರಿಗೆ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಷಿಪ್, ಡಾ. ರಾಧಾಕೃಷ್ಣನ್ ಯುಜಿಸಿ ಪೋಸ್ಟ್-ಡಾಕ್ಟರಲ್ ಫೆಲೋಷಿಪ್, ಹಿರಿಯ ಶ್ರೇಣಿಯ ಬೋಧಕ ಸಿಬ್ಬಂದಿಗೆ ಫೆಲೋಷಿಪ್, ಸೇವೆಯಲ್ಲಿರುವ ಬೋಧಕ ಸಿಬ್ಬಂದಿಗೆ ಸಂಶೋಧನಾ ಅನುದಾನ ಮತ್ತು ಹೊಸದಾಗಿ ನೇಮಕವಾದ ಬೋಧಕ ಸಿಬ್ಬಂದಿಗೆ ಡಾ.ಡಿ.ಕೊಠಾರಿ ಸಂಶೋಧನಾ ಅನುದಾನ ಸೇರಿವೆ. ನಿವೃತ್ತ ಬೋಧಕರಿಗೂ ಸಂಶೋಧನಾ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ 'ಹಿರಿಯ ಶ್ರೇಣಿಯ ಬೋಧಕ ಸಿಬ್ಬಂದಿ ಫೆಲೋಷಿಪ್' ಆರಂಭಿಸಲಾಗುತ್ತಿದೆ.