ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಭಾರತೀಯ ಯುವ ಕಾಂಗ್ರೆಸ್ ಘಟಕವು ಶನಿವಾರ ದೇಶದಾದ್ಯಂತ ನಿರುದ್ಯೋಗ ದಿನವಾಗಿ ಆಚರಿಸಿದೆ.
ನಿರುದ್ಯೋಗ ಸಮಸ್ಯೆ ಕುರಿತು ಗಮನಸೆಳೆಯಲು ಕಾಂಗ್ರೆಸ್ ಯುವಘಟಕದ ಕಾರ್ಯಕರ್ತರು, ಕಪ್ಪು ಬಣ್ಣದ ಟೀಶರ್ಟ್ ಧರಿಸಿ ಭಾಗವಹಿಸಿದ್ದು, ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಶನಿವಾರ ಮೋದಿ ಅವರ 72ನೇ ಜನ್ಮದಿನವಾಗಿತ್ತು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ಬಿಜೆಪಿ ನೇತೃತ್ವದ ಸರ್ಕಾರವು ಯುವಜನರಿಗೆ ನಿರುದ್ಯೋಗದ ಉಡುಗೊರೆ ನೀಡಿದೆ ಎಂದು ಟೀಕಿಸಿದರು.
ಸದ್ಯ ದೇಶದಲ್ಲಿ ಶೇ 60ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ ಅದನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.