ಬಾರಾಮುಲ್ಲಾ: 'ಇನ್ನು ಹತ್ತು ದಿನಗಳ ಒಳಗೆ ನೂತನ ಪಕ್ಷವನ್ನು ಘೋಷಿಸುತ್ತೇನೆ' ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಭಾನುವಾರ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಬಾರಾಮುಲ್ಲಾದ ಡಾಕ್ ಬಂಗ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 'ಜಮ್ಮು-ಕಾಶ್ಮೀರದಲ್ಲಿ ರದ್ದುಪಡಿಸಲಾಗಿರುವ 370ನೇ ವಿಧಿಯನ್ನು ಪುನರ್ ಸ್ಥಾಪಿಸಲು ಸಾಧ್ಯವಿಲ್ಲ.
ಇದಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಸಾಬೀತಾಗಬೇಕು. 370ನೇ ವಿಧಿ ಅಡಿಯಲ್ಲಿ ಜನರನ್ನು ಶೋಷಿಸಲು ಮತ್ತು ದಾರಿ ತಪ್ಪಿಸಲು ಇತರ ಪಕ್ಷಗಳಿಗೆ ನಾನು ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದ್ದಾರೆ.
'ಹೊಸದಾಗಿ ರಚನೆಯಾಗಲಿರುವ ಪಕ್ಷಕ್ಕೆ 'ಆಜಾದ್' ಎನ್ನುವ ಹೆಸರು ಇಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯಕ್ಕೆ ಹೆಸರನ್ನು ನಿರ್ಧರಿಸಿಲ್ಲ. ಆದರೆ, ಹೆಸರಿಗೆ ತಕ್ಕಂತೆ ಹೊಸ ಪಕ್ಷವು ಸ್ವತಂತ್ರ ಚಿಂತನೆ ಮತ್ತು ಸಿದ್ಧಾಂತವನ್ನು ಹೊಂದಿರಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ದೊರಕಿಸಿಕೊಡಲು, ಇಲ್ಲಿನ ಜನರ ಭೂಮಿಯ ಹಕ್ಕು ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಹೋರಾಟವನ್ನು ಒಳಗೊಂಡಿರುತ್ತದೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.
'ನನಗೆ ಬೆಂಬಲವಾಗಿ ನಿಂತಿರುವ ನನ್ನ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರ ಇಚ್ಛೆಯಂತೆ ಮುಂದಿನ 10 ದಿನಗಳಲ್ಲಿ ಹೊಸಪಕ್ಷವನ್ನು ಘೋಷಿಸುತ್ತೇನೆ. ಹೊಸ ಪಕ್ಷವು ಇತರ ಯಾವುದೇ ಪಕ್ಷದೊಂದಿಗೆ ಸೇರುವುದಿಲ್ಲ ಅಥವಾ ವಿಲೀನವಾಗುವುದಿಲ್ಲ. ಆ ರೀತಿ ಏನಾದರೂ ಆಗುವುದಿದ್ದರೆ ಅದು ನನ್ನ ಮರಣದ ನಂತರವೇ. ನನ್ನ ಪಕ್ಷವು ಅಭಿವೃದ್ಧಿಪರವಾಗಿದ್ದು, ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯಸೂಚಿಯನ್ನು ಒಳಗೊಂಡಿರುತ್ತದೆ. ಪಕ್ಷವು ಯಾವುದೇ ರಾಷ್ಟ್ರೀಯ ಇಲ್ಲವೇ ಪ್ರಾದೇಶಿಕ ಪಕ್ಷಗಳ ವಿರುದ್ಧವಾಗಿರುವುದಿಲ್ಲ. ನನಗೆ ಪಕ್ಷಾತೀತವಾಗಿ ಅನೇಕ ಸ್ನೇಹಿತರು ಇದ್ದಾರೆ' ಎಂದು ಆಜಾದ್ ಹೇಳಿದ್ದಾರೆ.