ಮಹಾಬಲಿ ಮತ್ತು ವಾಮನರು ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಹುಲಿವೇಷಧಾರಿಗಳೊಂದಿಗೆ ಜತೆಗೂಡಿ ಸಾಗುವ ಮೂಲಕ ಜಿಲ್ಲಾಡಳಿತ ಸಹಯೋಗದೊಂದಿಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಓಣಂ ಹಬ್ಬ ಮನಸೂರೆಗೊಂಡಿತು. ಮಹಾಬಲಿ, ವಾಮನಾವತಾರಿಯಿಂದ ವಿವಿಧೆಡೆ ಸಂಚಾರ ನಡೆಯಿತು.
ವಿದ್ಯಾನಗರ, ಕಲೆಕ್ಟರೇಟ್, ಜಿಲ್ಲಾ ಪಂಚಾಯಿತಿ ಮತ್ತು ಕಾಸರಗೋಡು ನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಲಾಯಿತು. ಡಿಟಿಪಿಸಿಯ ಐದು ದಿನಗಳ ಓಣಂ ಆಚರಣೆಗಳು ವಿದ್ಯಾನಗರ ಸ್ಟೇಡಿಯಂ ಕಾರ್ನರ್‍ನಲ್ಲಿ ಆರಂಭಗೊಂಡಿದ್ದು, ಕುಟುಂಬಶ್ರೀ ಕಾರ್ಯಕರ್ತರಿಂದ ತಿರುವಾದಿರ ಮತ್ತು ಒಪ್ಪನ ಕಾರ್ಯಕ್ರಮ ನಡೆಯಿತು. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಕಲಾವಿದರ ನೃತ್ಯ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ. ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದಿಂದ ಯಕ್ಷಗಾನ ಬೊಂಬೆಯಾಟ, ಅಲ್ಲದೆ ವಿವಿಧ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸೆ. 8ರಂದು ಪರವನಡ್ಕದ ಸರ್ಕಾರಿ ವೃದ್ಧಾಶ್ರಮದ ಸದಸ್ಯರೊಂದಿಗೆ ಓಣಂ ಆಚರಣೆ ನಡೆಯಲಿದೆ.
9ರಂದು ಬೆಳಗ್ಗೆ 9ಕ್ಕೆ ಕಾಞಂಗಾಡ್ ಹೆರಿಟೇಜ್ ಸ್ಕ್ವೇರ್‍ನಲ್ಲಿ ಹೂವಿನ ರಂಗೋಲಿ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 7ಕ್ಕೆ ಕರ್ಮ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಸಂಗೀತ ಕಲಾವಿದರಿಂದ ನೃತ್ಯ ಸಂಗೀತಶಿಲ್ಪ ಪ್ರದರ್ಶನ ನಡೆಯಲಿದೆ. 10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. 6ಕ್ಕೆ ಮಂಗಲಂಕಳಿ ಹಾಗೂ ಕುಟುಂಬಶ್ರೀ ಕಲಾವಿದರಿಂದ ತಿರುವಾತಿರ ಕಳಿ ಪ್ರದರ್ಶನ ನಡೆಯಲಿದೆ. ಸಂಜೆ 7ಕ್ಕೆ ರೇಬಂಟ್ ಆರ್ಕೆಸ್ಟ್ರಾದ ಸಂಗೀತ ಕಚೇರಿಯೊಂದಿಗೆ ಮುಕ್ತಾಯಗೊಳ್ಳಲಿವೆ.
ಮಹಾಬಲಿ, ವಾಮನಾವತಾರಿಯಿಂದ ನಗರ ಪ್ರದಕ್ಷಿಣೆ-ಡಿಟಿಪಿಸಿಯಿಂದ ಓಣಂ ಹಬ್ಬಕ್ಕೆ ಸಂಭ್ರಮದ ಚಾಲನೆ
0
ಸೆಪ್ಟೆಂಬರ್ 07, 2022