ನವದೆಹಲಿ: ಭಾರತವು ನಮೀಬಿಯಾದ 8 ಚೀತಾಗಳನ್ನು ಶನಿವಾರ ತನ್ನ ಅರಣ್ಯ ಪ್ರದೇಶಕ್ಕೆ ಮರುಪರಿಚಯಿಸಿದೆ. ಆದರೆ, ಅವುಗಳನ್ನು ತರಲು ಪ್ರಯತ್ನ ಆರಂಭಿಸಿದ್ದು ನಾವು ಎಂದು ಕಾಂಗ್ರೆಸ್ ವಾದಿಸಿದೆ.
'ಖಂಡಾಂತರ ಸ್ಥಳಾಂತರ ಯೋಜನೆ'ಯ ಭಾಗವಾಗಿ ಎಂಟು ಚೀತಾಗಳನ್ನು ಸೆಪ್ಟೆಂಬರ್ 17 ರಂದು ಆಫ್ರಿಕಾದ ನಮೀಬಿಯಾದಿಂದ ರಾಜಸ್ಥಾನದ ಜೈಪುರಕ್ಕೆ ಸರಕು ವಿಮಾನದಲ್ಲಿ ತರಲಾಯಿತು.
ನಂತರ ಅವುಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು.
ಮೋದಿ ಹುಟ್ಟು ಹಬ್ಬದ ದಿನವೇ ಚೀತಾಗಳನ್ನು ಭಾರತದ ಕಾಡಿಗೆ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಭಾರಿ ಪ್ರಚಾರ ಪಡೆದುಕೊಂಡಿದೆ.
ಚೀತಾಗಳು ಈಗ ದೇಶಕ್ಕೆ ಬಂದಿದ್ದರೂ, ಅವುಗಳನ್ನು ತರುವ ಯೋಜನೆ ಆರಂಭಿಸಿದ್ದು ನಾವು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾಹಿತಿ ಒದಗಿಸಿದೆ.
'2008-09ರಲ್ಲಿ 'ಪ್ರಾಜೆಕ್ಟ್ ಚೀತಾ' ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಅದನ್ನು ಅನುಮೋದಿಸಿತು. 2010ರ ಏಪ್ರಿಲ್‌ನಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಆಫ್ರಿಕಾದ 'ಚೀತಾ ಔಟ್ ರೀಚ್ ಸೆಂಟರ್'ಗೆ ಭೇಟಿ ನೀಡಿದ್ದರು. 2013 ರಲ್ಲಿ ಸುಪ್ರೀಂ ಕೋರ್ಟ್ ಯೋಜನೆಯನ್ನು ರದ್ದು ಮಾಡಿತ್ತು. 2020ರಲ್ಲಿ ನಿಷೇಧವನ್ನು ತೆರವು ಮಾಡಲಾಯಿತು. ಈಗ ಚೀತಾಗಳು ಭಾರತಕ್ಕೆ ಬಂದಿವೆ' ಎಂದು ಅದು ಹೇಳಿದೆ.
ಕಾಂಗ್ರೆಸ್‌ನ ಈ ವಾದವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಶ್ ಟೀಕೆ ಮಾಡಿದ್ದಾರೆ. 'ಯಾವ ಯೋಜನೆಗಳನ್ನು ಪೂರ್ಣಗೊಳಿಸಲು ಆಗಲಿಲ್ಲ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಆದರೆ ಹಾಗೆ ಹೇಳಿಕೊಳ್ಳಲು ಕಾಂಗ್ರೆಸ್ ಇತ್ತೀಚೆಗೆ ಹೆಮ್ಮೆ ಪಡುತ್ತಿದೆ' ಎಂದು ವ್ಯಂಗ್ಯ ಮಾಡಿದ್ದಾರೆ.