ನವದೆಹಲಿ: ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಕಾಫಿ ದೈತ್ಯ ಸ್ಟಾರ್ ಬಕ್ಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಲಕ್ಷ್ಮಣ್ ನರಸಿಂಹನ್, ಈ ಹಿಂದೆ ಲಂಡನ್ ಮೂಲದ ಬಹುರಾಷ್ಟ್ರೀಯ ಕಂಪನಿ ರೆಕಿಟ್ ನ ಸಿಇಒ ಆಗಿದ್ದರು.
ನರಸಿಂಹನ್ ಸ್ಟಾರ್ ಬಕ್ಸ್ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬೋರ್ಡ್ ಡೈರೆಕ್ಟರ್ ಆಗಲಿದ್ದಾರೆ ಎಂದು ಕಂಪನಿ ಗುರುವಾರ ಅಧಿಕೃತವಾಗಿ ತಿಳಿಸಿದೆ. ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿ ಸೇರುತ್ತಾರೆ ಆದರೆ, ಏಪ್ರಿಲ್ 2023ರಲ್ಲಿ ಅಧಿಕಾರ ವಹಿಸಿಕೊಳ್ಳುವರು ಎಂದು ಸ್ಟಾರ್ ಬಕ್ಸ್ ಹೇಳಿದೆ.
ಅಲ್ಲಿಯವರೆಗೂ ಹಂಗಾಮಿ ಸಿಇಒ ಹೊವಾರ್ಡ್ ಷ್ಕಲ್ಜ್ ಕಂಪನಿಯನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 30 ರಂದು ನರಸಿಂಹನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ರೆಕಿಟ್ ಸಂಸ್ಥೆ ಹೇಳಿದೆ.