ಕಾಸರಗೋಡು: ದಿನೇದಿನೇ ಹೆಚ್ಚುತ್ತಿರುವ ಬೀದಿನಾಯಿಗಳ ಕಾಟದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿರುವ ಪಾಲಕರು ಒಂದೆಡೆಯಾದರೆ, ಇಲ್ಲೊಬ್ಬರು ಪಾಲಕರು ಸವತಃ ಬಂದೂಕು ಹಿಡಿದು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೇಕಲದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮದರಸಾಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಇದರ ಬೆನ್ನಲ್ಲೇ ಬೇಕಲ ಹದ್ದದ್‍ನಗರದ ಸಮೀರ್ ಎಂಬಾತ ತನ್ನ ಏರ್‍ಗನ್‍ನೊಂದಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
13 ಮಂದಿ ಮಕ್ಕಳು ಬಂದೂಕಿನ ಬೆಂಗಾವಲಲ್ಲಿ ನಡೆಯುತ್ತಿರುವ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ನಾಯಿ ಕಚ್ಚಲು ಬಂದರೆ ಗುಂಡು ಹಾರಿಸುತ್ತೇನೆ ಎಂದೂ ಅಬ್ಬರಿಸುತ್ತಿರುವುದು ಕಂಡುಬಂದಿದೆ. ಗುರುವಾರ ಬೆಳಗ್ಗೆ ಮದರಸಾಕ್ಕೆ ಹೋಗುತ್ತಿದ್ದ ಆರು ವರ್ಷದ ವಿದ್ಯಾರ್ಥಿಯೊಬ್ಬನಿಗೆ ಬೀದಿ ನಾಯಿ ಕಚ್ಚಿತ್ತು. ಸಿಮೆಂಟ್ ಲೋಡ್ ಇಳಿಸಲು ಬಂದ ಚಾಲಕರು ಹಾಗೂ ಸ್ಥಳೀಯರು ನಾಯಿಯನ್ನು ಥಳಿಸಿ ಓಡಿಸಿದ್ದಾರೆ. ಈ ಘಟನೆ ಬಳಿಕ ವಿಡಿಯೋ ಬಿಡುಗಡೆಯಾಗಿದೆ.
ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಸುಮಾರು 400 ಮಂದಿ ಬೀದಿನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರ್ಷವೊಂದರಲ್ಲೇ ಈವರೆಗೆ 4297 ಮಂದಿ ಜನರು ಆ್ಯಂಟಿ ರೇಬಿಸ್ ಲಸಿಕೆ ತೆಗೆದುಕೊಂಡಿದ್ದಾರೆ. ಈ ತಿಂಗಳಿನಲ್ಲಿ ಇಲ್ಲಿಯವರೆಗೆ 220 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ.