ಆಹಾರ ಪದಾರ್ಥಗಳು ಹಾಳಾಗದಂತೆ ತಾಜಾ ಆಗಿ ದೀರ್ಘ ಕಾಲ ಇಡಲು ಸಾಕಷ್ಟು ಟಿಪ್ಸ್‌ಗಳನ್ನು ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ಹಿಂದಿನ ಕಾಲದಲ್ಲಿ ಆಹಾರಗಳನ್ನು ಹೇಗೆ ಹೆಚ್ಚು ಕಾಲ ಸಂಗ್ರಹಿಸುತ್ತಿದ್ದರು ಹಾಗೂ ಆಯುರ್ವೇದದ ಪ್ರಕಾರ ಉಪ್ಪಿನಕಾಯಿ, ಮಾಂಸ, ತುಪ್ಪ, ಹಣ್ಣುಗಳನ್ನು ಹೇಗೆ ಸಂಗ್ರಹಿಸಬೇಕು ಗೊತ್ತಾ?.
ಅಯುರ್ವೇದದ ಪ್ರಕಾರ ಕೆಲವು ಆಹಾರ ಪದಾರ್ಥಗಳನ್ನು ಹೀಗೆ ಸಂಗ್ರಹಿಸಿದರೆ ಹೆಚ್ಚು ಕಾಲ ಕೆಡದಂತೆ, ರುಚಿ ಬದಲಾಗದಂತೆ ಹಾಗೂ ತಾಜಾ ಆಗಿಯೇ ಇರುವಂತೆ ಕಾಪಾಡಬಹುದಂತೆ. ಯಾವ ಆಹಾರವನ್ನು ಹೇಗೆ ಸಂಗ್ರಹಿಸಬೇಕು ಇಲ್ಲಿದೆ ನೋಡಿ:
ರಸಗಳು ಮತ್ತು ತಂಪು ಪಾನೀಯಗಳು
ಆಯುರ್ವೇದದ ಪ್ರಕಾರ, ನೀವು ತಂಪು ಪಾನೀಯ ಅಥವಾ ಜ್ಯೂಸ್‌ನ ರುಚಿಯನ್ನು ದೀರ್ಘಕಾಲ ಉಳಿಸಿಕೊಳ್ಳಲು ಬಯಸಿದರೆ, ಅದನ್ನು ಯಾವಾಗಲೂ ಬೆಳ್ಳಿಯ ಪಾತ್ರೆಯಲ್ಲಿ ಫ್ರಿಜ್‌ನಲ್ಲಿ ಸಂಗ್ರಹಿಸಿ. ಇದರಿಂದ ಜ್ಯೂಸ್‌ನ ರುಚಿಯು ಬದಲಾಗುವುದಿಲ್ಲ ಅಲ್ಲದೆ ಹೆಚ್ಚು ಸಮಯ ತಾಜಾ ಆಗಿಯೇ ಇರುತ್ತದೆ.
ದೇಸಿ ತುಪ್ಪವನ್ನು ಹೀಗೆ ಇಟ್ಟುಕೊಳ್ಳಿ
ಆಗಾಗ ಮಾರುಕಟ್ಟೆಯಿಂದ ತಂದ ತುಪ್ಪವನ್ನು ಅದೇ ಪ್ಯಾಕೆಟ್ ನಲ್ಲಿ ಇಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಫ್ರಿಡ್ಜ್ ನಿಂದ ಹೊರ ತೆಗೆಯುತ್ತಾರೆ. ಆದರೆ ತುಪ್ಪವನ್ನು ಒಮ್ಮೆ ಬಿಸಿ ಮಾಡಿ ಕಬ್ಬಿಣದ ಪಾತ್ರೆಯಲ್ಲಿ ಇಡುವುದು ಉತ್ತಮ ಎಂಬುದು ನಿಮಗೆ ತಿಳಿದಿದೆಯೇ? ಇದರ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಇನ್ನು ಮುಂದೆ ಮನೆಯಲ್ಲಿ ಮಾಡಿದ್ದೇ ಅಗಲಿ ಅಥವಾ ಅಂಗಡಿಯಿಂದ ತರುವ ತುಪ್ಪವೇ ಆಗಿರಲಿ ಮೊದಲು ಅದನ್ನು ಬೆಚ್ಚಗೆ ಬಿಸಿ ಮಾಡಿ ಸ್ಟೀಲ್ ಡಬ್ಬಕ್ಕೆ ಹಾಕಿಡಿ. ಇದು ತುಪ್ಪದ ರುಚಿ ಹಾಗೂ ತಾಜಾತನ ಬದಲಾಗದಂತೆ ತಡೆಯುತ್ತದೆ.
ಮಾಂಸಕ್ಕಾಗಿ ಬೆಳ್ಳಿಯ ಪಾತ್ರೆಗಳು
ಮಾಂಸಾಹಾರ ಪ್ರಿಯರು ಮರುದಿನವೂ ತಮ್ಮ ನೆಚ್ಚಿನ ಮಾಂಸದ ಆಹಾರವನ್ನು ತಿನ್ನಲು ಬಯಸುವವರು ಅದನ್ನು ಸಂಗ್ರಹಿಸುವ ವಿಧಾನವನ್ನು ಬದಲಾಯಿಸಬೇಕು. ಆಯುರ್ವೇದದ ಪ್ರಕಾರ, ಮಾಂಸವನ್ನು ದೀರ್ಘಕಾಲದವರೆಗೆ ತಾಜಾವಾಗಿಡಬೇಕಾದರೆ, ಅದನ್ನು ಯಾವಾಗಲೂ ಬೆಳ್ಳಿಯ ಪಾತ್ರೆಯಲ್ಲಿ ಇರಿಸಬೇಕು ಮತ್ತು ರೆಫ್ರಿಜರೇಟರ್ನಲ್ಲಿಯೇ ಸಂಗ್ರಹಿಸಬೇಕು.
ಉಪ್ಪಿನಕಾಯಿ
ಉಪ್ಪಿನಕಾಯಿಯನ್ನು ಯಾವ ಪಾತ್ರೆಯಲ್ಲಿ ಫ್ರಿಡ್ಜ್‌ನಲ್ಲಿ ಇಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಗೊತ್ತೆ. ಉಪ್ಪಿನಕಾಯಿಯನ್ನು ಯಾವಾಗಲೂ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬೇಕು ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಉಪ್ಪಿನಕಾಯಿಗಳು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಬರುತ್ತವೆ, ಆದರೆ ಇದಕ್ಕಾಗಿ ನೀವು ಗಾಜಿನ ಪಾತ್ರೆಯನ್ನು ಆರಿಸಬೇಕು. ಪ್ಲಾಸ್ಟಿಕ್ ಡಬ್ಬದಲ್ಲಿ ಇದ್ದರೂ ನಂತರ ಅದನ್ನು ನೀವು ಗಾಜಿನ ಡಬ್ಬದಲ್ಲಿ ಸಂಗ್ರಹಿಸಿದರೆ ಉತ್ತಮ.