ನವದೆಹಲಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಚಿವಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
'ನಾವು ರಾಜ್ಯ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇವೆ ಆದರೆ ಸೋನಾಲಿ ಫೋಗಟ್ ಕುಟುಂಬದ ನಿರಂತರ ಬೇಡಿಕೆಯಿಂದಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗುವುದು. ಪ್ರಕರಣವನ್ನು ವರ್ಗಾಯಿಸಲು ನಾನು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ' ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸೋನಾಲಿ ಫೋಗಟ್ ಅವರ ದೇಹದ ಮೇಲೆ ಅನೇಕ ಮೂಗೇಟುಗಳು ಕಂಡುಬಂದ ನಂತರ ಅವರ ಕುಟುಂಬವು ಸಿಬಿಐ ತನಿಖೆಗೆ ಒತ್ತಾಯಿಸಿತ್ತು. 43 ವರ್ಷದ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ವಾಸಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಈ ಹಿಂದೆ ಸುಧೀರ್ ಸಾಂಗ್ವಾನ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ಬಗ್ಗೆ ಸೋನಾಲಿ ಫೋಗಟ್ ತನ್ನ ತಾಯಿಗೆ ದೂರು ನೀಡಿದ್ದಳು ಎಂದು ಕುಟುಂಬ ತಿಳಿಸಿದೆ. ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇಬ್ಬರನ್ನೂ ಗೋವಾ ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ವಾಸಿ ವಿರುದ್ಧ ಪೊಲೀಸರು ಕೊಲೆ ಆರೋಪ ಹೊರಿಸಿದ್ದಾರೆ. ಸೋನಾಲಿ ಫೋಗಟ್ ಅವರ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ಮತ್ತು ಆಕೆಯ ಜೊತೆಯಲ್ಲಿ ಗೋವಾಕ್ಕೆ ಬಂದಿದ್ದ ಆತನ ಸ್ನೇಹಿತ ಸುಖ್ವಿಂದರ್ ವಾಸಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣದ ಹಿಸಾರ್‌ನ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಆಗಸ್ಟ್ 22 ರಂದು ಗೋವಾದಲ್ಲಿ ನಿಧನರಾದರು. ಆರಂಭದಲ್ಲಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆನ್ನಲಾಗಿತ್ತು. ಆದರೆ ಅವರ ಕುಟುಂಬವು ಕೊಲೆ ಆರೋಪ ಮಾಡಿತು.