ಲಖನೌ: ಪರೀಕ್ಷೆಯಲ್ಲಿ ಅಕ್ಷರಗಳನ್ನು ತಪ್ಪಾಗಿ ಬರೆದ ದಲಿತ ವಿದ್ಯಾರ್ಥಿಗೆ ಸಾಯುವಂತೆ ಥಳಿಸಿದ ಶಿಕ್ಷಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ನಿಖಿಲ್ ದೋಹ್ರೆ, ಔರೈಯ ಜಿಲ್ಲೆಯ ವೈಶೋಲಿ ಗ್ರಾಮದವನಾಗಿದ್ದು, ಅಚಲ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾನ್‌ಫುಡ್ ರಸ್ತೆಯಲ್ಲಿರುವ ಆದರ್ಶ ಇಂಟರ್ ಕಾಲೇಜು ಸಂಸ್ಥೆಯ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ವಿದ್ಯಾರ್ಥಿಯು ಪರೀಕ್ಷೆಯ ಒಎಂಆರ್ ಶೀಟ್ ಭರ್ತಿ ಮಾಡುವಾಗ ತಪ್ಪು ಮಾಡಿದ್ದ ಮತ್ತು ಉತ್ತರ ಪತ್ರಿಕೆಯಲ್ಲಿ 'ಸಮಾಜಿಕ್' (ಸಾಮಾಜಿಕ) ಪದವನ್ನು 'ಸಮಾಜಕ್' ಎಂದು ಬರೆದಿದ್ದ. ಇಷ್ಟಕ್ಕೇ ಕೋಪಗೊಂಡು ಶಿಕ್ಷಕ ಥಳಿಸಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳ ಆರಂಭದಲ್ಲಿ ನಡೆದ ಪರೀಕ್ಷೆಯಲ್ಲಿ social ಪದವನ್ನು ತಪ್ಪಾಗಿ ಬರೆದಿದ್ದ ಕಾರಣಕ್ಕಾಗಿ ತಮ್ಮ ಮಗನಿಗೆ ಪ್ರೌಢ ಶಾಲೆ ಶಿಕ್ಷಕ ರಾಡ್‌ನಿಂದ ಥಳಿಸಿ, ಕಾಲಿನಿಂದ ಒದ್ದಿದ್ದರು. ಮೂರ್ಚೆ ತಪ್ಪಿ ನೆಲದ ಮೇಲೆ ಬೀಳುವವರೆಗೆ ಹೊಡೆದಿದ್ದರು ಎಂದು ಮೃತ ವಿದ್ಯಾರ್ಥಿಯ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ 15 ವರ್ಷದ ನಿಖಿಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದ. ಇದರ ಬೆನ್ನಲ್ಲೇ ಆರೋಪಿ ಶಿಕ್ಷಕ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ನಿಖಲ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಔರೈಯಾ ಜಿಲ್ಲೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬಾಲಕನ ಅಂತ್ಯಕ್ರಿಯೆಗೂ ಮುನ್ನ ಶಿಕ್ಷಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿ, ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವುದಾಗಿ ಸಿಂಗ್ ಹೇಳಿದ್ದಾರೆ.