ಕೊಚ್ಚಿ: ಕೇರಳದಲ್ಲಿ ವೈವಾಹಿಕ ಸಂಬಂಧಗಳು ಬಳಸಿ ಬಿಸಾಡುವ (ಯೂಸ್ ಆಯಂಡ್ ಥ್ರೋ) ಗ್ರಾಹಕ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಲಿವ್‌ಇನ್ ಸಂಬಂಧಗಳು ಮತ್ತು ಸ್ವಾರ್ಥ, ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದೂ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ಯಾವುದೇ ಹೊಣೆಗಾರಿಕೆ ಮತ್ತು ಕಟ್ಟುಪಾಡುಗಳಿಲ್ಲದೆ ಮುಕ್ತ ಜೀವನವನ್ನು ಆನಂದಿಸಲು ಯುವ ಪೀಳಿಗೆಯು ಮದುವೆಯಿಂದ ದೂರವಿರಲು ಬಯಸುತ್ತಿದೆ ಎಂದೂ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ನ್ಯಾಯಪೀಠ ಹೇಳಿದೆ.
ಮದುವೆಯಾಗಿ ಒಂಬತ್ತು ವರ್ಷಗಳ ಬಳಿಕ ಹೆಂಡತಿ ಮತ್ತು ಮೂವರು ಹೆಣ್ಣುಮಕ್ಕಳನ್ನು ತೊರೆದಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.