ನವದೆಹಲಿ: ಕಳೆದ ಎಂಟು ತಿಂಗಳಲ್ಲಿ 46 ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಸಂಬಂಧಿತ ಸಾರ್ವಜನಿಕ ಕುಂದುಕೊರತೆ ದೂರುಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಇದರಲ್ಲಿ ಹಣಕಾಸು ಸೇವೆಗಳ ಇಲಾಖೆ ವಿರುದ್ಧ ( ಡಿಎಫ್‌ಎಸ್) ಬಂದಿರುವ ದೂರುಗಳೇ ಹೆಚ್ಚು ಎಂದು ಇತ್ತೀಚಿನ ಅಧಿಕೃತ ವರದಿ ಹೇಳಿದೆ.
'ಹಣಕಾಸು ಸೇವೆಗಳ ಇಲಾಖೆಯ ಬ್ಯಾಂಕಿಂಗ್ ವಿಭಾಗದ ವಿರುದ್ಧ ಗರಿಷ್ಠ ಸಂಖ್ಯೆಯಲ್ಲಿ ಭ್ರಷ್ಟಾಚಾರ ಸಂಬಂಧಿ ದೂರುಗಳು ಬಂದಿವೆ. ಈ ವಿಭಾಗದ ವಿರುದ್ಧ 14,934 ದೂರುಗಳು ಈ ವರ್ಷ ದಾಖಲಾಗಿವೆ. ಇನ್ನು ವಿಮಾ ವಿಭಾಗದ ವಿರುದ್ಧ ಈ ವರ್ಷ 3,306 ದೂರುಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವಿರುದ್ಧ 2,223 ದೂರುಗಳು ಸ್ವೀಕೃತವಾಗಿವೆ' ಎಂದು ವರದಿ ಹೇಳಿದೆ.
ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ನಾಗರಿಕರು ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆಯ (ಸಿಪಿಜಿಆರ್‌ಎಎಂಎಸ್) ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಭ್ರಷ್ಟಾಚಾರ ವಿಷಯವೊಂದರಲ್ಲೇ ಈ ವರ್ಷ 46,627 ದೂರುಗಳು ಸ್ವೀಕಾರವಾಗಿವೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 19 ಲಕ್ಷ ದೂರುಗಳು ಸ್ವೀಕೃತವಾಗಿವೆ. ದೂರು ವಿಲೇವಾರಿಗೆ ವಿಧಿಸಿದ್ದ 45 ದಿನಗಳ ಗಡುವನ್ನು 30 ದಿನಗಳಿಗೆ ತಗ್ಗಿಸಲಾಗಿದೆ' ಎಂದು ಸಿಪಿಜಿಆರ್‌ಎಎಂಎಸ್‌ನ 2022ರ ಆಗಸ್ಟ್ ವರದಿಯಲ್ಲಿ ತಿಳಿಸಲಾಗಿದೆ.