ತಿರುವನಂತಪುರ: ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ)ಕಚೇರಿ ಹಾಗೂ ಈ ಸಂಘಟನೆ ಮುಖಂಡರ ಮನೆಗಳಿಗೆ ಎನ್‍ಐಎ ನಡೆಸಿದ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್‍ಐ ನಡೆಸಿದ ಹರತಾಳದಿಂದ ವ್ಯಾಪಕ ನಾಶ ನಷ್ಟ ಉಂಟಾಗಿದೆ. ಹಲವಾರು ಕೆಎಸ್ಸಾರ್ಟಿಸಿ ಬಸ್‍ಗಳು ಹಾನಿಗೀಡಾಗಿದೆ. ಹಲವು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪಿಎಫ್‍ಐ ಕಾರ್ಯಕರ್ತರ ಪುಂಡಾಟಿಕೆ ಬಗ್ಗೆ ಹೈಕೋರ್ಟು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದೆ. ಪಿಎಫ್‍ಐ ಕಾರ್ಯಕರ್ತರ ಹಿನ್ನೆಲೆ, ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಅರಿವಿದ್ದರೂ, ಈ ಸಂ¨ಘಟನೆ ಆಹ್ವಾನ ನೀಡಿದ್ದ ಹರತಾಳವನ್ನು ಎಡರಂಗ ಸರ್ಕಾರ ಗಂಭೀರವಾಗಿ ಪರಿಗಣಿಸದೆ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಪಕ್ಷಗಳು ಹಾಗೂ ರಾಜಕೀಯ ವಿಶ್ಲೇಷಕರು ಬಲವಾಗಿ ಖಂಡಿಸಿದ್ದಾರೆ.
ಮುಖ ಉಳಿಸಿಕೊಳ್ಳುವ ತಂತ್ರ:
ಒಂದೆಡೆ ಪ್ರತಿಪಕ್ಷಗಳ ಕಡು ಟೀಕೆ, ಇನ್ನೊಂದೆಡೆ ನ್ಯಾಯಾಲಯದ ವಿಮರ್ಶೆಯಿಂದ ಮುಖ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು, ಪಿಎಫ್‍ಐ ನಂಟು ಹೊಂದಿದ್ದಾರೆ ಎಂಬ ಸಂಶಯದಲ್ಲಿ ಕಣ್ಣೂರಿನ ಕೆಲವೊಂದು ವ್ಯಾಪಾರಿ ಸಂಸ್ಥೆಗಳಿಗೆ ಭಾನುವಾರ ರಾತ್ರಿ ದಾಳಿ ನಡೆಸಿದೆ. ಕಣ್ಣೂರು ನಗರ ಠಾಣೆ ಎಸ್.ಐ ನೇತೃತ್ವದಲ್ಲಿ ಇಲ್ಲಿನ ಹೈಪರ್ ಮಾರ್ಕೆಟ್‍ಗೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಹೈಪರ್ ಮಾರ್ಕೆಟ್‍ನ ಪಾಲುದಾರರಲ್ಲಿ ಕೆಲವರಿಗೆ ಪಿಎಫ್‍ಐ ಸಂಪರ್ಕವಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ದಾಳಿ ಆಯೋಜಿಸಲಾಗಿದೆ. ಥಾಣಾ, ಮಟ್ಟನ್ನೂರ್, ವಳಪಟ್ಟಣ ಪ್ರದೇಶದಲ್ಲೂ ತಪಾಸಣೆ ಮುಂದುವರಿದಿದೆ. ಕಣ್ಣೂರಿನಲ್ಲಿ ಪಿಎಫ್‍ಐ ಚಟುವಟಿಕೆ ಅತ್ಯಂತ ಸಕ್ರಿಯವಾಗಿದ್ದು, ಇಲ್ಲಿನ ಬಹುತೇಕ ವ್ಯಾಪಾರಿ ಸಂಸ್ಥೆಗಳನ್ನು ನಡೆಸುವವರಿಗೆ ಪಿಎಫ್‍ಐ ಸಂಪರ್ಕವಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಎನ್‍ಐಎ ಸೆ. 22ರಂದು ದೇಶಾದ್ಯಂತ ಪಿಎಫ್‍ಐ ವಿರುದ್ಧ ನಡೆಸಿರುವ ಅತಿದೊಡ್ಡ ಕಾರ್ಯಾಚರಣೆಯ ನಂತರ ರಾಜ್ಯ ಸರ್ಕಾರಕ್ಕೆ ಜ್ಞಾನೋದಯವಾಗಿರುವುದು ಹಾಸ್ಯಾಸ್ಪದ. ಪಿಎಫ್‍ಐ ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಎಡರಂಗ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದೀಗ ದಾಳಿಯ ನಾಟಕವಾಡುತ್ತಿರುವುದಾಗಿ ಪ್ರತಿಪಕ್ಷಗಳು ಆರೋಪಿಸಿದೆ.
ಕಣ್ಣೂರಿನಲ್ಲಿ ಇತರ ವ್ಯಾಪಾರಿ ಸಂಸ್ಥೆಗಳ ಮೇಲೂ ದಾಳಿ ನಡೆಸುವ ಸಾಧ್ಯತೆಯಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ, ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಯುವಕನರ ನೇಮಕಾತಿ, ಕಾಶ್ಮೀರದಲ್ಲಿ ಭಯೋತ್ಪಾದನಾ ತರಬೇತಿಗೆ ಯುವಕರ ನೇಮಕಾತಿ ಹೀಗೆ ಹತ್ತುಹಲವು ಕಾನೂನುಬಾಹಿರ ಕ್ರತ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡಿರುವುದಾಗಿ ಮಾಹಿತಿಯಿದೆ.
ಪಾಪ್ಯುಲರ್ ಫ್ರಂಟ್ ಹಿಂಸಾಚಾರ: ಮೌನಗೊಂಡ ಎಡರಂಗ ಸರ್ಕಾರ: ಪ್ರತಿಪಕ್ಷಗಳ ಟೀಕೆ
0
ಸೆಪ್ಟೆಂಬರ್ 26, 2022