ಅಹಮದಾಬಾದ್: 'ಪ್ರಸಕ್ತ ಜಾಗತಿಕ ವಿದ್ಯಮಾನಗಳಲ್ಲಿ ಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶ ಎಂಬುದು ವ್ಯೂಹಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಿದೆ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದರು.
'ಕಡಲಿಗೆ ಸಂಬಂಧಿಸಿದ ಭಾರತದ ಹಿತಾಸಕ್ತಿಯ ಸಂರಕ್ಷಣೆ ಕುರಿತು ಚರ್ಚಿಸುವಾಗ ಪೆಸಿಫಿಕ್ ಸಾಗರವನ್ನು ಪ್ರಸ್ತಾಪಿಸದೇ, ಹಿಂದೂಮಹಾಸಾಗರದ ಬಗ್ಗೆ ಮಾತ್ರ ಮಾತನಾಡುವುದನ್ನು ಒಪ್ಪಲಾಗದು. ಈ ರೀತಿಯ ಚರ್ಚೆ ನಮ್ಮ ಚಿಂತನೆಯ ಮಿತಿಯನ್ನು ತೋರುತ್ತದೆ. ಭಾರತವು ಇಂಥ ಮಿತಿಯನ್ನು ದಾಟಬೇಕಿದೆ' ಎಂದು ಅವರು ಹೇಳಿದರು.
ಗುಜರಾತಿ ಭಾಷೆಗೆ ಅನುವಾದಗೊಂಡಿರುವ ತಮ್ಮ 'ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆಯನ್ ಅನ್‌ಸರ್ಟನ್ ವರ್ಲ್ಡ್' ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
'ಭಾರತವು ಇತರ ದೇಶಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ನಂಬಿಕೆ ಆಳವಾಗಿ ಬೇರೂರಿದೆ. ಈ ಧೋರಣೆ ಕೂಡ ಬದಲಾಗಬೇಕು' ಎಂದು ಅವರು ಪ್ರತಿಪಾದಿಸಿದರು.
'ಹಿಂದೂಮಹಾಸಾಗರ ಹಾಗೂ ಪೆಸಿಫಿಕ್ ಸಾಗರದ ನಡುವಿನ ಗೆರೆ ಭೂಪಟದಲ್ಲಿ, ಅಟ್ಲಾಸ್‌ಗಳಲ್ಲಿ ಕಾಣಸಿಗುತ್ತದೆ. ವಾಸ್ತವದಲ್ಲಿ ಅಂಥ ರೇಖೆಯೇ ಇಲ್ಲ. ನಮ್ಮ ಹಿತಾಸಕ್ತಿ ಬದಲಾಗಿದೆ. ಹೀಗಾಗಿ ನಮ್ಮ ಚಿಂತನೆಯೂ ಬದಲಾಗುವುದು ಅಗತ್ಯ' ಎಂದರು.