ಕಾಸರಗೋಡು: ಕಾವ್ಯ ಸಾಹಿತ್ಯ ಪ್ರಕಾರದ ಮೊದಲ ಹೆಜ್ಜೆಯಾಗಿದ್ದು, ಇದು ಮನಸ್ಸು ಅರಳಿಸುವ ಕಲೆಯಾಗಿದೆ ಎಂದು ಹಿರಿಯ ಕವಯಿತ್ರಿ ವಿಜಯಪುರದ ಸರಸ್ವತೀ ಚಿಮ್ಮಲಗಿ ತಿಳಿಸಿದ್ದಾರೆ.
ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಶ್ರೀಎಡನೀರು ಮಠ ಮತ್ತು ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಸಹಯೋಗದಲ್ಲಿ ಎಡನೀರು ಮಠದ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡ ಮೂರು ದಿವಸಗಳ ರಾಷ್ಟ್ರೀಯ ಮಟ್ಟದ ಕಾವ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕಾವ್ಯಗಳಲ್ಲಿ ಸಮಾಜ ತಿದ್ದುವ ಅಗಾಧ ಶಕ್ತಿ ಅಡಕವಾಗಿದೆ. ವಾಸ್ತವಿಕ ಪ್ರಜ್ಞೆ ಇಲ್ಲದಿದ್ದಲ್ಲಿ ಕಾವ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮನುಷ್ಯ ಮನುಷ್ಯರಾಗಿ ಬಾಳಿ ಬದುಕಲು ಸಾಹಿತ್ಯಗಳು ಬಲು ದೊಡ್ಡ ಆಯುಧವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಬಿ.ವಿ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಕಲೆಗಳಿಗೂ ಮೂಲಸ್ವರೂಪವಾಗಿರುವ ಕಾವ್ಯಗಳು ಸಮಾಜಕ್ಕೆ ಬಲುದೊಡ್ಡ ಕೊಡುಗೆ ನೀಡಿದೆ. ಜಾತಿ, ಪಂಥ, ಗಡಿಯನ್ನು ಮೀರಿನಿಂತಿರುವ ಸಾಹಿತ್ಯವನ್ನು ಹೊರತುಪಡಿಸಿ, ನಮ್ಮ ಕಲೆ, ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಸಾಹಿತ್ಯ ಎಂದಿಗೂ ನಿಂತ ನೀರಾಗಿರಬಾರದು. ನಿರಂತರ ಚಟುವಟಿಕೆಗಳಿಂದ ಇದನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ಕವಿ, ವೈದ್ಯ ಸಹಿತಿ ಡಾ. ರಮಾನಂದ ಬನಾರಿ, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೇಖಕ, ಅನುವಾದಕ ಪ್ರೊ. ಪಿ.ಎನ್ ಮೂಡಿತ್ತಾಯ, ನಾಗರಾಜ ತಲಕಾಡು ಉಪಸ್ಥಿತರಿದ್ದರು. ಕಮ್ಮಟ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಡಾ. ಯು. ಮಹೇಶ್ವರಿ, ಡಾ. ವಸಂತ ಕುಮಾರ್ ಪೆರ್ಲ ಅವರು ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು. ನಂತರ ಗುಂಪು ಚರ್ಚೆ, ಶಿಬಿರಾರ್ಥಿ ಕವಿಗೋಷ್ಠಿ ನಡೆಯಿತು.