ಕೊಚ್ಚಿ: 'ಭ್ರಷ್ಟರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತಿದ್ದಂತೆ, ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಧ್ರುವೀಕರಣ ಸೃಷ್ಟಿಯಾಗಿದೆ. ಲಂಚದ ಆರೋಪ ಎದುರಿಸುತ್ತಿರುವವರನ್ನು ರಕ್ಷಿಸಲು, ಕೆಲವು ರಾಜಕೀಯ ಗುಂಪುಗಳು ಒಗ್ಗೂಡಲು ಬಹಿರಂಗವಾಗಿಯೇ ಪ್ರಯತ್ನಿಸುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲೇವಡಿ ಮಾಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಗುರುವಾರ ಕೇರಳಕ್ಕೆ ಆಗಮಿಸಿದ ಮೋದಿ, 'ಯುವಕರ ಹಿತಾಸಕ್ತಿಗಳಿಗೆ ಮತ್ತು ಅಭಿವೃದ್ಧಿಗೆ ಭ್ರಷ್ಟಾಚಾರವೇ ಅತಿದೊಡ್ಡ ತೊಡಕಾಗಿದೆ.
ದೇಶದ ಪ್ರತಿ ಪ್ರಜೆಗೂ ಮೂಲ ಸೌಲಭ್ಯ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ' ಎಂದು ಹೇಳಿದರು.
ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇಂತಹ ರಾಜಕೀಯ ಸಂಘಟನೆಗಳ ವಿರುದ್ಧ ಭಾರತ ಮತ್ತು ಕೇರಳ ಜನರು ಎಚ್ಚರಿಕೆಯಿಂದ ಇರಬೇಕು. ಬಿಜೆಪಿಯು ದೇಶದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ರಾಜ್ಯದ ಜನರು ಅರಿತಿದ್ದು, ಹೊಸ ಭರವಸೆಯೊಂದಿಗೆ ಬಿಜೆಪಿಯನ್ನು ನೋಡುತ್ತಿದ್ದಾರೆ' ಎಂದರು.
'ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಇದರಿಂದ ಕೇರಳದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗಾಗಿ ಮತ್ತು ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಕೇರಳದಲ್ಲಿ ಸುಮಾರು ₹ 1 ಲಕ್ಷ ಕೋಟಿ ವಿನಿಯೋಗಿಸುತ್ತಿದೆ' ಎಂದು ಮೋದಿ ಹೇಳಿದರು.