ಬೀಜಿಂಗ್: ಮುಂದಿನ ತಿಂಗಳು ನಡೆಯಲಿರುವ ಚೀನಾದ ಆಡಳಿತ ಪಕ್ಷದ ನಿರ್ಣಾಯಕ ಅಧಿವೇಶನಕ್ಕೆ ಮುಂಚಿತವಾಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸುವುದಿಲ್ಲ ಎಂಬ ಊಹಾಪೋಹಗಳ ಮಧ್ಯೆ ಅವರು ಮಂಗಳವಾರ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 16ರಂದು ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಿಂದ ಹಿಂದಿರುಗಿದ ನಂತರ ಜಿನ್‌ಪಿಂಗ್ ಅವರ ಮೊದಲ ಸಾರ್ವಜನಿಕ ಪ್ರದರ್ಶನವಾಗಿದೆ.
ಚೀನಾದ ಅಧಿಕೃತ ಸುದ್ದಿ ಸಂಸ್ಥೆ 'ಕ್ಸಿನ್ಹುವಾ'ದ ಸುದ್ದಿ ಪ್ರಕಾರ, ಕಮ್ಯುನಿಸ್ಟ್ ಪಕ್ಷದ ಕಳೆದೊಂದು ದಶಕದ ಆಡಳಿತ ಸಾಧನೆ ಬಿಂಬಿಸುವ ವಸ್ತುಪ್ರದರ್ಶನದಲ್ಲಿ ಜಿನ್ ಪಿಂಗ್ ಭಾಗವಹಿಸಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ, ಚೀನಾದ ಗುಣಲಕ್ಷಣಗಳೊಂದಿಗೆ ಸಮಾಜವಾದದ ಹೊಸ ವಿಜಯದ ಕಡೆಗೆ ಸಂಕಲ್ಪದೊಂದಿಗೆ ಮುನ್ನಡೆಯಲು ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಜಿನ್ ಪಿಂಗ್ ಅವರು ಕಳೆದ ಏಳು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದರು ಎಂದು ತಿಳಿದುಬಂದಿದೆ. ವಿದೇಶದಿಂದ ಹಿಂದಿರುಗಿದ ನಂತರ ದೇಶದ ಕೋವಿಡ್-ನೀತಿಯ ಭಾಗವಾಗಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.