ಚೆನ್ನೈ: ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಈ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಘಟಕವು ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಮತ್ತು ಸಾರ್ವಜನಿಕರಿಗೆ ಮೀನು ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
'ಈ ಕಾರ್ಯಕ್ರಮಕ್ಕಾಗಿ ಚೆನ್ನೈನ ಆರ್‌ಎಸ್‌ಆರ್‌ಎಂ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಜನುಮದಿನದಂದು ಜನಿಸುವ ಎಲ್ಲ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ'ಎಂದು ಕೇಂದ್ರದ ಮೀನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಎಲ್. ಮುರುಗನ್ ತಿಳಿಸಿದ್ದಾರೆ.
ಒಂದು ಉಂಗುರ ಸುಮಾರು 2 ಗ್ರಾಂನಷ್ಟಿರಲಿದ್ದು, ಪ್ರತೀ ಉಂಗುರಕ್ಕೆ ₹5000 ನಷ್ಟು ಖರ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ದಿನಕ್ಕೆ 10-15 ಮಕ್ಕಳ ಜನನವಾಗಲಿದೆಎಂದು ಪಕ್ಷದ ಸ್ಥಳೀಯ ಘಟಕ ಅಂದಾಜಿಸಿದೆ. ಇದು ಉಚಿತ ಕೊಡುಗೆಯಲ್ಲ. ಆ ದಿನ ಹುಟ್ಟುವ ಮಕ್ಕಳಿಗೆ ಸ್ವಾಗತ ಕೋರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜನುಮದಿನ ಆಚರಿಸುತ್ತೇವೆ ಎಂದು ಅವರು ಹೇಳಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಆಗಸ್ಟ್ 30ರಂದು ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ ಮೋದಿ ಜನುಮದಿನದಂದು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದ್ದರು.