ಕಾಸರಗೋಡು: ಬೀದಿ-ಬೀದಿ ನಾಯಿಗಳಿಗೆ ಜಿಲ್ಲೆಯಲ್ಲಿ ಸಮಗ್ರ ಲಸಿಕಾ ಆಂದೋಲನ ಹಮ್ಮಿಕೊಳ್ಳಲು ಹಾಗೂ ಸಾಕು ನಾಯಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಗೂ ಪರವಾನಗಿ ನೀಡಲು ನಿರ್ಧರಿಸಲಾಗಿದೆ. ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಸಭೆಯಲ್ಲಿ ಜಿಲ್ಲೆಯಲ್ಲಿನ ಬೀದಿ ನಾಯಿ ಉಪಟಳದ ಕುರಿತು ಚರ್ಚಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೆಪ್ಟೆಂಬರ್ 26 ರಂದು ಲಸಿಕೆಯನ್ನು ಪ್ರಾರಂಭಿಸಿ ಅಕ್ಟೋಬರ್ 26ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಸಾಕು ನಾಯಿಗಳಿಗೆ ಪರವಾನಗಿ ಪಡೆಯಲು ನಿಗದಿತ ಶುಲ್ಕ ನಿಗದಿಪಡಿಸಲು ನಿರ್ಧರಿಸಲಾಗಿದೆ.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಎಬಿಸಿ ಕೇಂದ್ರದ ನವೀಕರಣಕ್ಕೆ ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ ತುರ್ತಾಗಿ 20 ಲಕ್ಷ ರೂ. ಮಂಜೂರುಗೊಳಿಸುವುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದರು. ಬೀದಿನಾಯಿ ಉಪಟಳ ತಡೆಗಟ್ಟಲು ವಾರ್ಡ್ ಮಟ್ಟದಲ್ಲಿ ಯೋಜನೆಗಳನ್ನು ಜಾರಿಗೊಳಿಸಬೇಕದ ಅಗತ್ಯವಿದೆ ಎಂದು ತಿಳಿಸಿದರು.
ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ನಡೆಸಲು ಜಿಲ್ಲೆಯ ಒಡೆಯಂಚಾಲ್, ಮಂಗಲ್ಪಾಡಿ ಮತ್ತು ಮುಳಿಯಾರ್‍ನಲ್ಲಿ ತಾತ್ಕಾಲಿಕ ಎಬಿಸಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಯಿತು. ಪ್ರಸ್ತುತ ಜಿಲ್ಲೆಯಲ್ಲಿ ಕಾಸರಗೋಡು ಮತ್ತು ತ್ರಿಕರಿಪುರದಲ್ಲಿ ಎಬಿಸಿ ಕೇಂದ್ರಗಳಿದೆ. ನಾಯಿಗಳಿಗೆ ಲೈಸನ್ಸ್ ಹಾಗೂ ಲಸಿಕೆ ಹಾಕುವ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ತೆರಳಿ ಗಣತಿ ನಡೆಸಲಾಗುವುದು. ಬೀದಿನಾಯಿಗಳ ನಿಯಂತ್ರಣ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಂಜೇಶ್ವರಕ್ಕೆ ಡೆಪ್ಯುಟಿ ಕಲೆಕ್ಟರ್ (ಆರ್‍ಆರ್) ಸಿರೋಶ್ ಜಾನ್, ಕಾಸರಗೋಡು ಆರ್‍ಡಿಒ ಅತುಲ್ ಎಸ್ ನಾಥ್, ಉದುಮಕ್ಕೆ ಸಹಾಯಕ ಜಿಲ್ಲಾಧಿಕಾರಿ (ಎಲ್‍ಎ) ಶಶಿಧರನ್ ಪಿಳ್ಳೆ, ಕಾಞಂಗಾಡಿಗೆ ಅಪರ ಜಿಲ್ಲಾಧಿಕಾರಿ ಡಿ.ಎಸ್ ಮೇಘಶ್ರೀ, ತೃಕರಿಪುರಕ್ಕೆ ಸಹಾಯಕ ಜಿಲ್ಲಾಧಿಕಾರಿ (ಎಲ್‍ಆರ್) ಜಗ್ಗಿ ಪೌಲ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಸ್ವಚ್ಛತಾ ಅಭಿಯಾನ:
ಬೀದಿ ನಾಯಿ ಉಪಟಳ ಕಡಿಮೆ ಮಾಡಲು ಜಿಲ್ಲೆಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ವ್ಯಾಪಾರಿಗಳು, ಹೋಟೆಲ್ ಸಂಘಟನೆಗಳು, ಮಾಂಸದಂಗಡಿ, ಆಡಿಟೋರಿಯಂ ಮಾಲೀಕರ ತುರ್ತು ಸಭೆ ನಡೆಸಲಾಗುವುದು. ಸಾವಯವ ತ್ಯಾಜ್ಯವನ್ನು ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗುವುದು.ಪಂಚಾಯಿತಿ ವ್ಯಾಪ್ತಿಯ ಎಲ್ಲ ವ್ಯಾಪಾರ ಸಂಸ್ಥೆಗಳು, ಅಂಗಡಿಗಳು, ಮಾಂಸ ಮಾರಾಟ ಮಳಿಗೆಗಳನ್ನು ತಪಾಸಣೆ ನಡೆಸಲು ಪ್ರತ್ಯೇಕ ತಂಡ ರಚಿಸಲಾಗುವುದು. ಕರ್ತವ್ಯ ಲೋಪವೆಸಗುವ ಸಂಸ್ಥೆಗಳ ವಿರುದ್ಧ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸಾವಯವ ಮತ್ತು ಅಜೈವಿಕ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳುತ್ತವೆ.
ಬೀದಿ ನಾಯಿಗಳ ದಾಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಬಲಿಯಾಗುತ್ತಿರುವುದರಿಂದ ಶಾಲೆಗಳನ್ನು ಕೇಂದ್ರೀಕರಿಸಿ ಜಾಗೃತಿ ಚಟುವಟಿಕೆಗಳನ್ನೂ ನಡೆಸಲಾಗುವುದು. ಸಾಕು ನಾಯಿಗಳಿಗೆ ಪರವಾನಗಿ ಮತ್ತು ಲಸಿಕೆಗಳನ್ನು ಖಾತ್ರಿಪಡಿಸಲಾಗುವುದು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಎಬಿಸಿ ಯೋಜನೆಗೆ ವಾರ್ಷಿಕ ಯೋಜನೆಯಲ್ಲಿ ಎಲ್ಲ ಗ್ರಾ.ಪಂ.ಗಳು ಹಣ ಮೀಸಲಿಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸಹಾಯಕ ಜಿಲ್ಲಾಧಿಕಾರಿ ಮಿಥುನ್ ಪ್ರೇಮರಾಜ್, ಆರ್‍ಡಿಒ ಅತುಲ್ ಎಸ್.ನಾಥ್, ಜಿಲ್ಲಾ ಮೃಗಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್, ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ವಿ.ಹರಿದಾಸ್, ಪಶು ವೈದ್ಯಾಧಿಕಾರಿ ಡಾ.ಚಂದ್ರಬಾಬು ಉಪಸ್ಥಿತರಿದ್ದರು.
ಬೀದಿನಾಯಿಗಳ ನಿಯಂತ್ರಣಕ್ಕೆ ಲಸಿಕೆ ಅಭಿಯಾನ, ತಾತ್ಕಾಲಿಕ ಎಬಿಸಿ ಕೇಂದ್ರಗಳ ಸ್ಥಾಪನೆ
0
ಸೆಪ್ಟೆಂಬರ್ 20, 2022
Tags