ಶಿಯೋಪುರ : ಕುನೊ ರಾಷ್ಟ್ರೀಯ ಉದ್ಯಾನದ ಕ್ವಾರಂಟೇನ್ ಪ್ರದೇಶದಲ್ಲಿ ಶನಿವಾರ ಬಿಡಲಾದ ನಮೀಬಿಯಾದಿಂದ ತಂದ ಎಂಟು ಚೀತಾಗಳ ಪೈಕಿ ಫ್ರೆಡ್ಡಿ ಮತ್ತು ಆಲ್ಟನ್ ಸೋಮವಾರ ಲವಲವಿಕೆಯಿಂದ ಇದ್ದದ್ದು ಕಂಡುಬಂತು. ಹೆಣ್ಣು ಚೀತಾಗಳಾದ ಸವನ್ನಾ ಮತ್ತು ಸಾಶಾ ಕೂಡ ಉತ್ಸಾಹದಿಂದಲೇ ಇದ್ದವು.
ಇತರ ನಾಲ್ಕು ಚೀತಾಗಳಾದ ಒಬಾನ್, ಆಶಾ, ಸಿಬಿಲಿ ಮತ್ತು ಸೈಸಾ ಕೂಡ ಉಲ್ಲಾಸದಲ್ಲಿ ಇದ್ದಂತೆಯೇ ಕಂಡು ಬಂದವು ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ.
ಭಾರತಕ್ಕೆ ಸ್ಥಳಾಂತರವಾದ ಬಳಿಕ ಮೊದಲ ಬಾರಿಗೆ ಈ ಚೀತಾಗಳಿಗೆ ಭಾನುವಾರ ಆಹಾರ ನೀಡಲಾಗಿದೆ. ಕೋಣದ ಮಾಂಸವನ್ನು ತಲಾ 2 ಕೆ.ಜಿಯಂತೆ ಚೀತಾಗಳಿಗೆ ನೀಡಲಾಗಿದೆ. ಒಂದು ಚೀತಾ ಮಾತ್ರ ಸ್ವಲ್ಪ ಕಡಿಮೆ ಆಹಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ‍್ರಾಣಿಗಳು ಮೂರು ದಿನಕ್ಕೆ ಒಮ್ಮೆ ಮಾತ್ರ ಆಹಾರ ತೆಗೆದುಕೊಳ್ಳುತ್ತವೆ ಎಂದು ಪರಿಣತರು ಹೇಳಿದ್ದಾರೆ.
ಈ ಚೀತಾಗಳ ಮೇಲೆ ಅಧಿಕಾರಿಗಳು ನಿಕಟ ನಿಗಾ ಇರಿಸಿದ್ದಾರೆ. ಹೊಸ ಸ್ಥಳವನ್ನು ಚೀತಾಗಳು ಕುತೂಹಲದಿಂದ ಗಮನಿಸುತ್ತಿವೆ. ಶನಿವಾರ ಕಾಡಿಗೆ ಬಿಡುವ ಹೊತ್ತಿನಲ್ಲಿ ಚೀತಾಗಳು ಹಿಂಜರಿಕೆ ತೋರಿದಂತೆ ಕಂಡಿತ್ತು. ಆದರೆ, ಸೋಮವಾರದ ಹೊತ್ತಿಗೆ ಈ ಹಿಂಜರಿಕೆ ಮಾಯವಾಗಿದೆ. ಚೀತಾಗಳು ಕ್ವಾರಂಟೈನ್‌ನಲ್ಲಿ ಒಂದು ತಿಂಗಳು ಇರಲಿವೆ.
ಚೀತಾಗಳಿಗೆ ನಮೀಬಿಯಾದಲ್ಲಿಯೇ ಹೆಸರು ಇರಿಸಲಾಗಿದೆ. ಈ ಹೆಸರು ಬದಲಾಯಿಸುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಚೀತಾಕ್ಕೆ 'ಆಶಾ' ಎಂಬ ಭಾರತೀಯ ಹೆಸರು ಇರಿಸಲಾಗಿದೆಯಲ್ಲವೇ ಎಂಬ ಪ್ರಶ್ನೆಗೆ, 'ಬಹುಶಃ, ಭಾರತೀಯ ಅಧಿಕಾರಿಯೊಬ್ಬರು ಅದರ ಪಂಜರದ ಮೇಲೆ ಈ ಹೆಸರು ಬರೆದಿರಬಹುದು' ಎಂದು ಅಧಿಕಾರಿಗಳು ಹೇಳಿದ್ದಾರೆ.