ನವದೆಹಲಿ: ಲಂಡನ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ಮಹಿಳಾ ತಂಡ ತಂಗಿದ್ದ ವೇಳೆ ನಗದು, ಕಾರ್ಡ್‌ಗಳು ಮತ್ತು ಆಭರಣಗಳು ಸೇರಿದಂತೆ ಅವರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ತಾನಿಯಾ ಭಾಟಿಯಾ ಸೋಮವಾರ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ 3-0 ಅಂತರದ ಭರ್ಜರಿ ಜಯ ದಾಖಲಿಸಿದೆ. ಸರಣಿಯ ಕೊನೆಯ ಪಂದ್ಯ ಶನಿವಾರ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲವು ದಾಖಲಿಸಿತ್ತು.
ತಾನಿಯಾ ಕಳ್ಳತನದ ಬಗ್ಗೆ ಟ್ವಿಟರ್ ಮಾಡಿದ್ದು ಮ್ಯಾರಿಯಟ್ ಹೋಟೆಲ್ ಲಂಡನ್ ಮೈದಾ ವೇಲ್ ಆಡಳಿತದಿಂದ ಆಘಾತ ಮತ್ತು ನಿರಾಶೆಯಾಗಿದೆ. ನಾನು ಇತ್ತೀಚೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾಗಿದ್ದಾಗ ಯಾರೋ ನನ್ನ ಕೋಣೆಗೆ ನುಗ್ಗಿ ನಗದು, ಕಾರ್ಡ್‌ಗಳು, ಕೈಗಡಿಯಾರ ಮತ್ತು ಆಭರಣಗಳ ಜೊತೆಗೆ ನನ್ನ ಬ್ಯಾಗನ್ನು ಕದ್ದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ(ಇಸಿಬಿ) ಟ್ವಿಟರ್ ಹ್ಯಾಂಡಲ್ ಗೆ ಟ್ಯಾಗ್ ಮಾಡಿ ಮತ್ತೊಂದು ಟ್ವೀಟ್ ಮಾಡಿರುವ ಅವರು, ಈ ವಿಷಯದ ತ್ವರಿತ ತನಿಖೆ ಮತ್ತು ಪರಿಹಾರಕ್ಕಾಗಿ ಆಶಿಸುತ್ತೇನೆ. ಇಸಿಬಿಯ ಆದ್ಯತೆಯ ಹೋಟೆಲ್ ಪಾಲುದಾರರಲ್ಲಿ ಭದ್ರತೆಯ ಕೊರತೆಯು ಆಶ್ಚರ್ಯಕರವಾಗಿದೆ. ಅವರು ಸಹ ಗಮನಹರಿಸುತ್ತಾರೆ ಎಂದು ಭಾವಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
24 ವರ್ಷದ ಆಟಗಾರ್ತಿಯ ದೂರಿಗೆ ಟ್ವೀಟ್ ಮೂಲಕ ಸ್ಪಂಧಿಸಿರುವ ಹೋಟೆಲ್ ಆಡಳಿತ ಮಂಡಳಿ, ನಾವು ಇದಕ್ಕೆ ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸದ ಹೊರತಾಗಿ ನಿಮ್ಮ ಕಾಯ್ದಿರಿಸುವಿಕೆಯ ವಿವರಗಳನ್ನು ಹಂಚಿಕೊಳ್ಳಿ, ಇದರಿಂದ ನಾವು ಅದನ್ನು ಪರಿಶೀಲಿಸಬಹುದು ಎಂದು ಹೇಳಿದೆ.
ಭಾರತವು ಸೆಪ್ಟೆಂಬರ್ 10 ರಿಂದ 24 ರವರೆಗೆ ಇಂಗ್ಲೆಂಡ್‌ನಲ್ಲಿ ಮೂರು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಏಕದಿನ ಸರಣಿ ಆಡಿದ್ದು ತಾನಿಯಾ ಭಾರತ ಮಹಿಳಾ ಏಕದಿನ ತಂಡದ ಭಾಗವಾಗಿದ್ದರು.