ನವದೆಹಲಿ: ಬಿಹಾರದಲ್ಲಿನ ರಾಜಕೀಯ ಬೆಳವಣಿಗೆ ಆ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿ ಭೇಟಿ ನಂತರ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪ್ರಶಾಂತ್ ಕಿಶೋರ್, 'ಯಾರೋ ಒಬ್ಬರು ದೆಹಲಿಯಲ್ಲಿ ರಾಜಕೀಯ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ ಎಂದರೆ ಅವರ ಶ್ರೇಷ್ಠತೆ ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬರ್ಥವಲ್ಲಾ, ಮಮತಾ ಬ್ಯಾನರ್ಜಿ, ಕೆಸಿಆರ್ ಕೂಡಾ ದೆಹಲಿಯಲ್ಲಿ ಹಲವರನ್ನು ಭೇಟಿಯಾಗಿದ್ದಾರೆ ಎಂದರು.
ಇದರಲ್ಲಿ ಹೊಸದು ಏನಿಲ್ಲ, ಪ್ರತಿಪಕ್ಷಗಳಿಂದ ಏನೋ ಹೊಸದು ಆಗುತ್ತಿದೆ ಎಂದು ಹೇಗೆ ಪರಿಗಣಿಸಲು ಸಾಧ್ಯ. 2024ರ ಲೋಕಸಭಾ ಚುನಾವಣೆಯಲ್ಲಿ ಇದು ಮಹತ್ವದ ಬದಲಾವಣೆ ತರಲಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಅವರು ಹೇಳಿದರು.
ಬುಧವಾರ ಎನ್ ಸಿಪಿ ಮುಖಂಡ ಶರದ್ ಪವಾರ್ ಮತ್ತು ಸಿಪಿಐ(ಎಂಎಲ್ ) ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಅವರನ್ನು ಭೇಟಿಯಾಗಿದ್ದ ನಿತೀಶ್ ಕುಮಾರ್, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಟ್ಟಾಗಬೇಕಾಗಿದೆ ಎಂದು ಕರೆ ನೀಡಿದ್ದರು.