ಮುಳ್ಳೇರಿಯ: ಆಮದು ಹೂವುಗಳಿಗೆ ಪೈಪೋಟಿ ನೀಡಬಲ್ಲ ಸ್ಥಳೀಯ ಹೂವಿನ ಮಾರುಕಟ್ಟೆಯನ್ನು ಸ್ಥಾಪಿಸಿದ್ದು ಕುಟುಂಬಶ್ರೀಯ ಯಶಸ್ಸು. ಹೂವಿನ ಮಾರುಕಟ್ಟೆಯ ಮೂಲಕವೇ ಒಂದೂವರೆ ಲಕ್ಷ ರೂ.ಸಂಪಾದಿಸಿದ್ದು ಈಗಿನ ಹೊಸ ವಿಶೇಷ. ಓಣಂ ಮಾರುಕಟ್ಟೆಯ ಮೂಲಕ ಸ್ಥಳೀಯ ತರಕಾರಿ ಹಾಗೂ ವಿವಿಧ ಉತ್ಪನ್ನಗಳ ಜತೆಗೆ ಹೂಗಳನ್ನು ಓಣಂ ಮಾರುಕಟ್ಟೆಯಲ್ಲಿ ಮಾರಾಟಮಾಡುವ ಮೂಲಕ ಈ ವಿಕ್ರಮ ಸ್ಥಾಪಿಸಲಾಗಿದೆ.
ಕುಟುಂಬಶ್ರೀ ಓಣಂ ಸಂತೆಯ ಮೂಲಕ ಒಟ್ಟು ವಹಿವಾಟು ನಡೆಸಿದ್ದು 48.36 ಲಕ್ಷ ರೂ. ಗಳ ವ್ಯವಹಾರ. ಕೇವಲ ನಿರೀಕ್ಷೆಯೊಂದಿಗಷ್ಟೇ ಮಾರುಕಟ್ಟೆಗಳನ್ನು ತಲುಪುವ ಆಲೋಚನೆಯೊಂದಿಗೆ ಕುಟುಂಬಶ್ರೀಯ ಓಣಂ ಸಂತೆ ಸೆಪ್ಟೆಂಬರ್ 4 ರಿಂದ 7 ರವರೆಗೆ ನಡೆದವು. 42 ಓಣಂ ಸಂತೆಗಳು ಮತ್ತು ನಾಲ್ಕು ಜಿಲ್ಲಾ ಮಟ್ಟದ ಮಾರುಕಟ್ಟೆಗಳು ಜಿಲ್ಲೆಯಲ್ಲಿ ಸಿಡಿಎಸ್‍ಗಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸಿದ್ದವು.
ಕುಟುಂಬಶ್ರೀ ಬ್ರಾಂಡ್ ಅಕ್ಕಿ, ಕುಟುಂಬಶ್ರೀ ಬ್ರೆಡ್, ಕುಟುಂಬಶ್ರೀ ತಂಡಗಳು ಬೆಳೆದ ವಿಷಮುಕ್ತ ತರಕಾರಿ, ಉಪ್ಪಿನಕಾಯಿ, ವಿವಿಧ ಚಿಪ್ಸ್, ಕುಂಬಳಕಾಯಿ, ಜಾಮ್, ಬೆಲ್ಲದ ಬೆರಟ್ಟಿ(ಸಿಹಿ ವಸ್ತು), ಊಟಕ್ಕೆ ನಂಜಿಕೊಳ್ಳುವ ಖಾರದ ಮೆಣಸುಗಳು ಓಣಂ ಸಂತೆಯಲ್ಲಿ ಹೆಚ್ಚು ಮಾರಾಟವಾದ ವಸ್ತುಗಳಾಗಿವೆ. ಜತೆಗೆ ಪರಿಶಿಷ್ಟ ಪಂಗಡದ ಉತ್ಪನ್ನಗಳೂ ಓಣಂ ಮಾರುಕಟ್ಟೆ ಪ್ರವೇಶಿಸಿವೆ.
ಜಿಲ್ಲೆಯಲ್ಲಿ 18 ಸಿಡಿಎಸ್ ತಂಡಗಳ ಅಡಿಯಲ್ಲಿ 12 ಎಕರೆ ಜಮೀನಿನಲ್ಲಿ ಹೂ ಕೃಷಿ ಈ ಬಾರಿ ವಿಶೇಷವಾಗಿ ಮಾಡಲಾಗಿತ್ತು. ಕಾಂಞಂಗಾಡ್ 1, 2, ಪಳ್ಳಿಕ್ಕೆರೆಯ, ಚೆಂಗಳ, ಪುಲ್ಲೂರ್ ಪೆರಿಯಾ, ತ್ರಿಕರಿಪುರ, ಅಜಾನೂರು, ಮಡಿಕೈ, ನೀಲೇಶ್ವರ, ಮಂಗಲ್ಪಾಡಿ, ಕರಿಂದಳ 2, ಪೀಲಿಕೋಡ್, ಚೆರುವತ್ತೂರು, ಕೋಡೋಂ-ಬೆಳ್ಳೂರು, ಮುಳಿಯಾರ್ ಗಳ ಕುಟುಂಬಶ್ರೀ ತಂಡಗಳು ಚೆಂಡು ಮಲ್ಲಿಗೆ ಸಹಿತ ಇತರ ಕೆಲವು ಹೂಗಳನ್ನು ಬೆಳೆಸಿ ಸಿಡಿಎಸ್‍ಗಳ ಅಡಿಯಲ್ಲಿ ಕೃಷಿ ಮಾರುಕಟ್ಟೆಗೆ ತರಲಾಯಿತು. ಚೆರುವತ್ತೂರು, ಪಡನ್ನ, ಪುಲ್ಲೂರು-ಪೆರಿಯ ಮತ್ತು ಕಾಞಂಗಾಡು ಪ್ರದೇಶದ ತಂಡಗಳ ಹೂಕೃಷಿ ಉತ್ತಮ ಇಳುವರಿ ಪಡೆದಿವೆ. ಕುಟುಂಬಶ್ರೀ ಸಾಮಾನ್ಯ ಮಾರುಕಟ್ಟೆಯಲ್ಲಿ 300 ರಿಂದ 400 ರೂ.ಗೆ ಮಾರಾಟವಾದರೆ, 150ರಿಂದ 250 ರೂ.ಗೆ ಹೂವು ಸಿಗುವಂತೆ ಮಾಡಿದಾಗ ಬೇಡಿಕೆ ಹೆಚ್ಚಿತ್ತು. ಕುಟುಂಬಶ್ರೀ ಜಿಲ್ಲಾ ಮಿಷನ್ ಉತ್ತಮ ಮಾರುಕಟ್ಟೆಗಳಿಗೆ ಬಹುಮಾನಗಳನ್ನು ನೀಡುತ್ತದೆ.
ಸ್ಥಳೀಯ ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಕುಟುಂಬಶ್ರೀ ಉತ್ತಮ ಮಧ್ಯಸ್ಥಿಕೆಗಳನ್ನು ಮಾಡುತ್ತಿದೆ. ಕೋವಿಡ್ ನಂತರ ಬಂದ ಓಣಂ ಅನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿದರು.
ಅಭಿಮತ:
ಕುಟುಂಬಶ್ರೀಯ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಪರಿಸರ, ಪ್ರದೇಶ ಗಮನಿಸಿ ವಿಸ್ತರಿಸಲಾಗುವುದು.
- ಟಿ.ಸುರೇಂದ್ರನ್
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ