ಜೈಪುರ: ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಪರ್ಯಾಯ ಸಭೆ ಕರೆದಿದ್ದ ರಾಜಸ್ಥಾನ ಸಚಿವ ಶಾಂತಿ ಧರಿವಾಲ್, ತಮ್ಮನ್ನು ತಾವು ಶಿಸ್ತಿನ ಸಿಪಾಯಿ ಎಂದು ಕರೆದುಕೊಂಡಿದ್ದಾರೆ.
ಸದ್ಯ ರಾಜಸ್ಥಾನ ಮುಖ್ಯಮಂತ್ರಿ ಆಗಿರುವ ಅಶೋಕ್ ಗೆಹಲೋತ್ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇದರಿಂದಾಗಿ ತೆರವಾಗಲಿರುವ ಸಿಎಂ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರನ್ನಾಗಿ ಕಳುಹಿಸಿದ್ದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಗೆಹಲೋತ್ ನಿವಾಸದಲ್ಲಿ ಭಾನುವಾರ ಸಂಜೆ ಸಿಎಲ್‌ಪಿ ಸಭೆ ನಿಗದಿಯಾಗಿತ್ತು.
ಆದರೆ ಗೆಹಲೋತ್ ಬಣದ ಧರಿವಾಲ್ ನಿವಾಸದಲ್ಲಿ ಮತ್ತೊಂದು ಸಭೆ ನಡೆದಿತ್ತು. ಇದನ್ನು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಅಜಯ್ ಮಾಕನ್, ಅಶಿಸ್ತಿನ ನಡೆಯೆಂದು ಟೀಕಿಸಿದ್ದರು. ಮಾಕನ್ ಟೀಕೆಗೆ ಪ್ರತಿಕ್ರಿಯಿಸಿರುವ ಧರಿವಾಲ್, 'ರಾಜಕೀಯ ಜೀವನದಲ್ಲಿ 50 ವರ್ಷ ಪೂರ್ಣಗೊಳಿಸಿದ್ದೇನೆ. ಈ ಅವಧಿಯಲ್ಲಿ ಎಂದೂ ಶಿಸ್ತನ್ನು ಕಡೆಗಣಿಸಿಲ್ಲ. ಈಗಲೂ ಶಿಸ್ತನ್ನು ಉಲ್ಲಂಘಿಸಿಲ್ಲ. ಹೈಕಮಾಂಡ್ ತೀರ್ಮಾನವನ್ನು ನಾವು ಯಾವಾಗಲೂ ಒಪ್ಪಿಕೊಂಡಿದ್ದೇವೆ. ಆದರೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ನಮಗಿದೆ' ಎಂದಿದ್ದಾರೆ.
'ನಾನು ಸಂಸದೀಯ ವ್ಯವಹಾರಗಳ ಸಚಿವ. ಹಾಗಾಗಿ ಶಾಶಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನನ್ನ ಮನೆಗೆ ಬಂದಿದ್ದರು. ನಾನು ಯಾರೊಬ್ಬರನ್ನೂ ಕರೆದಿರಲಿಲ್ಲ. ಅವರೆಲ್ಲ ತಾವಾಗಿಯೇ ಬಂದಿದ್ದರು. ಆಗಮನಕ್ಕೂ ಮುನ್ನ ಬರುತ್ತಿರುವುದಾಗಿ ಮತ್ತು ನಮ್ಮ ಮಾತುಗಳನ್ನು ಕೇಳಬೇಕು ಎಂದು ತಿಳಿಸಿದ್ದರು. ಮಾತುಕತೆ ನಡೆದಾಗ ರಾತ್ರಿ ಎಂಟೂವರೆಯಾಗಿತ್ತು' ಎಂದು ಹೇಳಿದ್ದಾರೆ.