ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇಂದು (ಸೋಮವಾರ) ಭಾರತಕ್ಕೆ ಬರಲಿದ್ದಾರೆ. ನಾಲ್ಕು ದಿನಗಳ ಭಾರತ ಪ್ರವಾಸ ಹಮ್ಮಿಕೊಂಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾಗಲಿದ್ದು, ಮಾತುಕತೆ ನಡೆಸಲಿದ್ದಾರೆ.
ರಕ್ಷಣೆ, ವ್ಯಾಪಾರ, ನದಿ ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.
ಕುಶಿಯಾರಾ ನದಿ ನೀರಿನ ಹಂಚಿಕೆ ಸೇರಿದಂತೆ ಹಲವು ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕುವ ನಿರೀಕ್ಷೆ ಇದೆ.
ಗುರುವಾರ ರಾಜಸ್ಥಾನದ ಅಜ್ಮೇರ್‌ಗೆ ತೆರಳಲಿರುವ ಹಸೀನಾ, ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.
ಹಸೀನಾ ಜತೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್, ವಾಣಿಜ್ಯ ಸಚಿವ ಟಿಪ್ಪು ಮುನ್ಶಿ, ರೈಲ್ವೆ ಸಚಿವ ಮಹಮ್ಮದ್ ನೂರುಲ್ ಇಸ್ಲಾಂ ಸುಜನ್ ಹಾಗೂ ಇತರ ಕೆಲವು ಸಚಿವರು ಸಹ ಭಾರತಕ್ಕೆ ಬರಲಿದ್ದಾರೆ.
ಹಸೀನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರನ್ನೂ ಭೇಟಿಯಾಗಲಿದ್ದಾರೆ.
ಹಸೀನಾ ಅವರು 2019ರ ಅಕ್ಟೋಬರ್‌ನಲ್ಲಿ ಕೊನೆಯ ಸಲ ಭಾರತಕ್ಕೆ ಬಂದಿದ್ದರು. ಪ್ರಧಾನಿ ಮೋದಿ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಬಾಂಗ್ಲಾದೇಶದ ಪಿತಾಮಹ ಶೇಕ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಹಾಗೂ ಆ ದೇಶದ 50ನೇ ಸ್ವಾತಂತ್ರ್ಯ ದಿನ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.