ಅಲಿಗಢ: ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ಆವರಣದೊಳಗೆ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಲಿಗಢದ ಖಾಸಿಂಪುರ ಗ್ರಾಮದ ಶಾಲೆಯಲ್ಲಿ ಮೊಸಳೆ ಪತ್ತೆಯಾಗಿತ್ತು.
ಬಳಿಕ ಅದನ್ನು ಸೆರೆಹಿಡಿದು ಗಂಗಾ ನದಿಯಲ್ಲಿ ಬಿಡಲಾಯಿತು ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ದಿವಾಕರ್ ವಸಿಷ್ಠ ತಿಳಿಸಿದ್ದಾರೆ.
ಮೊಸಳೆಯನ್ನು ಕಂಡ ವಿದ್ಯಾರ್ಥಿಗಳು ಭೀತಿಗೊಳಗಾದರು. ಬಳಿಕ ಸ್ಥಳೀಯರು ಸೇರಿಕೊಂಡು ಕೊಠಡಿಯೊಳಗೆ ಕೂಡಿ ಹಾಕುವಲ್ಲಿ ಯಶಸ್ವಿಯಾದರು.
ಈ ಪ್ರದೇಶದಲ್ಲಿ ಹಲವಾರು ಕೆರೆಗಳಿದ್ದು, ಸಮೀಪದಲ್ಲೇ ಗಂಗಾ ನದಿ ಹರಿಯುತ್ತಿದೆ. ಗ್ರಾಮದ ಕೆರೆಗಳಲ್ಲಿ ಹಲವಾರು ಬಾರಿ ಮೊಸಳೆಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಕೆರೆಗಳಲ್ಲಿ ಮೊಸಳೆ ವಾಸವಾಗಿವೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.