ನವದೆಹಲಿ:ಕಾಂಗ್ರೆಸ್ ನ ಭಾರತ ಜೋಡೋ ಯಾತ್ರೆಯಲ್ಲಿ ಮಕ್ಕಳನ್ನು ರಾಜಕೀಯ ಸಾಧನವನ್ನಾಗಿ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಅದರ ವಿರುದ್ಧ ವಿಚಾರಣೆಯನ್ನು ಆರಂಭಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು ಮಂಗಳವಾರ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎನ್ಜಿಒ ಜವಾಹರ್ ಬಾಲ ಮಂಚ್ ರಾಜಕೀಯ ಉದ್ದೇಶಗಳಿಂದ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದಾರೆ ಎಂದು ಆರೋಪಿಸಿರುವ ದೂರನ್ನು ತಾನು ಸ್ವೀಕರಿಸಿರುವುದಾಗಿ ಎನ್ಸಿಪಿಸಿಆರ್ ತಿಳಿಸಿದೆ. ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿರುವ ಜವಾಹರ್ ಬಾಲ ಮಂಚ್ ಏಳರಿಂದ 18 ವರ್ಷ ವಯೋಮಾನದ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಉದ್ದೇಶವನ್ನು ಹೊಂದಿದೆ.
ರಾಜಕೀಯ ಅಜೆಂಡಾದೊಂದಿಗೆ ಮಕ್ಕಳನ್ನು ಕಾಂಗ್ರೆಸ್ ನ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದನ್ನು ಹಲವಾರು ಆತಂಕಕಾರಿ ಚಿತ್ರಗಳು ಮತ್ತು ವೀಡಿಯೊಗಳು ತೋರಿಸುತ್ತಿವೆ ಎಂದು ಆರೋಪಿಸಲಾಗಿದೆ ಎಂದು ಎನ್ಸಿಪಿಸಿಆರ್ ಹೇಳಿದೆ. ಇದು ವಯಸ್ಕರು ಮಾತ್ರ ರಾಜಕೀಯ ಪಕ್ಷದ ಸದಸ್ಯರಾಗಬಹುದು ಎಂಬ ಚುನಾವಣಾ ಆಯೋಗದ ನಿಯಮದ ಉಲ್ಲಂಘನೆಯಾಗಿದೆ ಎಂದು ಅದು ಆಪಾದಿಸಿದೆ.