ಲಖನೌ: ಮೊಬೈಲ್ಫೋನ್ ಬ್ಯಾಟರಿ ಬ್ಲಾಸ್ಟ್ ಆಗಿ ಎಂಟು ತಿಂಗಳ ಮಗುವಿನ ಪ್ರಾಣ ಹೋದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್ ಮಾಡುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಎಂಟು ತಿಂಗಳ ಮಗು ನೇಹಾ ಪ್ರಾಣ ಕಳೆದುಕೊಂಡಿದ್ದಾಳೆ.
ಮಗುವನ್ನು ಮಂಚದ ಮೇಲೆ ಮಲಗಿಸಿ ತಾಯಿ ಕುಸುಮ ಅವರು ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರು, ಮೊಬೈಲ್ ಫೋನ್ನನ್ನು ಚಾರ್ಜ್‍ಗೆ ಹಾಕಿಟ್ಟು ಹೋಗಿದ್ದರು. ಸೋಲಾರ್ ಪ್ಯಾನೆಲ್ ಮೂಲಕ ಅವರು ಚಾರ್ಜಿಂಗ್ ಮಾಡುತ್ತಿದ್ದರು.
ಬಟ್ಟೆ ತೊಳೆಯಲು ಹೋದ ಸ್ವಲ್ಪ ಸಮಯದಲ್ಲಿಯೇ ಮಗು ಜೋರಾಗಿ ಕಿರುಚುವುದನ್ನು ಕೇಳಿದ ಕುಸುಮ ಓಡಿ ಬಂದಿದ್ದಾರೆ. ಅದಾಗಲೇ ಮಗು ನೇಹಾ ಸುಟ್ಟ ಗಾಯಗಳಿಂದ ನರಳುತ್ತಿದ್ದಳು. ಬೆನ್ನು, ಕೈ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗಲಿಲ್ಲ. ಮಗು ಪ್ರಾಣ ಬಿಟ್ಟಿದೆ!
ಈ ಮೊಬೈಲ್‍ನ್ನು 6 ತಿಂಗಳ ಹಿಂದೆ ಖರೀದಿಸಲಾಗಿತ್ತು. ಚಾರ್ಜ್ ಮಾಡಲು ಪ್ಲಗ್‍ಗೆ ಹಾಕಿಟ್ಟಾಗ ಅದು ಓವರ್ ಚಾರ್ಜ್ ಆಗಿ ಹೀಗೆ ಆಗಿದೆ ಎನ್ನಲಾಗಿದೆ. ಮಗುವಿನ ಅಪ್ಪ ಸುನೀಲ್ ಕುಮಾರ್ ಕೂಲಿ ಕಾರ್ಮಿಕರಾಗಿದ್ದು ಮನೆಯಲ್ಲಿನ ಬೆಳಕು ಹಾಗೂ ಮೊಬೈಲ್ ಚಾರ್ಜ್ಗಾಗಿ ಸೋಲಾರ್ ಪ್ಯಾನೆಲ್ ಖರೀದಿಸಿದ್ದರು.