ಲಂಡನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನದಿಂದ ಇಡೀ ಬ್ರಿಟನ್ ಶೋಕಸಾಗರದಲ್ಲಿ ಮುಳುಗಿದೆ. ಲಂಡನ್‌ನಲ್ಲಿ ರಾಣಿಯವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಅತ್ಯಂತ ಸಂಪ್ರದಾಯಬದ್ಧವಾಗಿ ಸಾಗುತ್ತಿವೆ.
ಇನ್ನು ರಾಣಿಯವರ ನಿಧನದ ನಂತರ 'ರಾಯಲ್ ಕುಟುಂಬ'ದ ಒಳಗಿನ ಮುನಿಸುಗಳು ತಣ್ಣಗಾಯಿತೇ? ಎಂಬ ಅನುಮಾನಗಳು ಒಡಮೂಡಿವೆ. ಏಕೆಂದರೆ ರಾಣಿ ಎಲಿಜಬೆತ್ ಮೊಮ್ಮಕ್ಕಳಾದ ಪ್ರಿನ್ಸ್ ವಿಲಿಯಮ್ ಹಾಗೂ ಹ್ಯಾರಿ (ರಾಜ ಮೂರನೇ ಚಾರ್ಲ್ಸ್‌ರ ಮೊದಲ ಹೆಂಡತಿ ಡಯಾನಾ ಮಕ್ಕಳು) ತಮ್ಮ ಪತ್ನಿಯರ ಸಮೇತ ರಾಣಿಯ ಅಂತ್ಯಸಂಸ್ಕಾರದ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ರಾಜಮನೆತನದ ಕರ್ತವ್ಯಗಳನ್ನು ದಿಕ್ಕರಿಸಿ ಪ್ರಿನ್ಸ್ ಹ್ಯಾರಿ ತನ್ನ ಹೆಂಡತಿ, ನಟಿ ಮೇಗ್ಗನ್ ಮಾರ್ಕೆಲ್ ಜೊತೆ ಅಮೆರಿಕದಲ್ಲಿ ನೆಲೆಸಿದ್ದರು. ಅವರ ಈ ನಡೆ ಬ್ರಿಟನ್‌ನಲ್ಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು.
2020 ರಿಂದ ಈಚೆಗೆ ವಿಲಿಯಮ್ ಹಾಗೂ ಹ್ಯಾರಿ ತಮ್ಮ ಪತ್ನಿಯರ ಸಮೇತ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಮೇಗ್ಗನ್ ಹಾಗೂ ಕೇಟ್ ಮಿಡಲ್‌ಟನ್ (ವಿಲಿಯಮ್ ಪತ್ನಿ) ಸಂಬಂಧಗಳು ಹಳಸಿವೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿದ್ದವು.
ಭಾನುವಾರ ವಿಲಿಯಮ್ ಹಾಗೂ ಹ್ಯಾರಿ ಅವರು ತಮ್ಮ ಪತ್ನಿಯರ ಜೊತೆ ಬಕಿಂಗ್‌ಹ್ಯಾಮ್ ಅರಮನೆಗೆ ಬಂದು ರಾಣಿಯವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಶೋಕದ ಅಂಗವಾಗಿ ಕಪ್ಪು ಧಿರಿಸಿನಲ್ಲಿ ಕೇಟ್ ಹಾಗೂ ಮೇಗ್ಗನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅರಮನೆ ಮುಂದೆ ನೆರೆದಿದ್ದ ಜನರ ಜೊತೆ ಬೆರೆತು ಪರಸ್ಪರ ಭಾವಪರವಶರಾದರು.
ಸಂದರ್ಶನವೊಂದರಲ್ಲಿ ಮೇಗ್ಗನ್, ಕೇಟ್ ನನ್ನನ್ನು ಅಳುವಂತೆ ಮಾಡಿದ್ದಳು ಎಂದು ದೂರಿದ್ದರು. ಅಲ್ಲದೇ ಬ್ರಿಟಿಷ್ ರಾಜಮನೆತನ ಉಸಿರುಗಟ್ಟಿಸುವ ವಾತಾವರಣ ಹೊಂದಿದೆ ಎಂಬ ಅರ್ಥದಲ್ಲಿ ಪುಸ್ತಕವೊಂದನ್ನೂ ಬರೆದಿದ್ದರು. ಆ ನಂತರ ಕೇಟ್ ಹಾಗೂ ಮೇಗ್ಗನ್ ಸಂಬಂಧದಲ್ಲಿ ಸಾಕಷ್ಟು ಬಿರುಕು ಉಂಟಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ರಾಣಿ 2ನೇ ಎಲಿಜಬೆತ್ ನಿಧನದ ತರುವಾಯ ಬ್ರಿಟನ್ ರಾಜಮನೆತನದ ರಾಜನೆಂದು ಘೋಷಣೆಯಾದ ಮೂರನೇ ಚಾರ್ಲ್ಸ್ ಅವರ ಹಿರಿಯ ಮಗ ಪ್ರಿನ್ಸ್ ವಿಲಿಯಮ್ ಆಗಿದ್ದಾರೆ. ಪ್ರಿನ್ಸ್ ವಿಲಿಯಮ್ ಬ್ರಿಟನ್ ರಾಜಮನೆತನಕ್ಕೆ ಮೂರನೇ ಚಾರ್ಲ್ಸ್ ಉತ್ತರಾಧಿಕಾರಿಯಾಗುತ್ತಾರೆ.
ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದ್ದು.ರಾಣಿಯ ಗೌರವಾರ್ಥ ಬ್ರಿಟನ್‌ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ದೀರ್ಘಾವಧಿಯ ಬದುಕು ಮತ್ತು ಆಡಳಿತ ಕುರಿತು ಸಂತಾಪದ ಮಾತುಗಳು ಕೇಳಿ ಬರುತ್ತಿವೆ.
ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್ ಎಸ್ಟೇಟ್‌ನಲ್ಲಿ ಇಡಲಾಗಿದೆ. ಜೇಮ್ಸ್ ಅರಮನೆ ಆವರಣದಲ್ಲಿ ಅಂತ್ಯಸಂಸ್ಕಾರದ ನಡೆಯಲಿದೆ ಎಂದು ಅರಮನೆಯ ಹೇಳಿಕೆಯು ತಿಳಿಸಿದೆ.