ಲಕ್ನೋ: 2017ರಲ್ಲಿ ಯುವ ಜೋಡಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಕುಟುಂಬವೊಂದರ ನಾಲ್ವರು ಸದಸ್ಯರಿಗೆ ಉತ್ತರಪ್ರದೇಶದ ಬದೌನ್ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಕಿಷ್ಣಪಾಲ್, ಆತನ ಪತ್ನಿ ಜಲಧಾರಾ ಹಾಗೂ ಅವರ ಪುತ್ರರಾದ ವಿಜಯಪಾಲ್ ಮತ್ತು ರಾಮ್‌ವೀರ್‌ಗೆ ಜಿಲ್ಲಾ ನ್ಯಾಯಾಧೀಶ ಪಂಕಜ್ ಅಗರ್ವಾಲ್ ಅವರು ಮರಣ ದಂಡನೆ ವಿಧಿಸಿದ್ದಾರೆ.
ತಲಾ 50 ಸಾವಿರ ರೂಪಾಯಿ ದಂಡ ವಿಧಿಸುವಂತೆ ಕೂಡ ಪ್ರತಿಯೊಬ್ಬ ದೋಷಿಗೆ ನ್ಯಾಯಾಲಯ ಆದೇಶಿಸಿದೆ. ದಂಡದ ಅರ್ಧ ಪಾಲನ್ನು ಸಂತ್ರಸ್ತೆಯ ಕುಟುಂಬಕ್ಕೆ ನೀಡುವಂತೆ ಅದು ನಿರ್ದೇಶಿಸಿದೆ. 2017 ಮೇ 14ರಂದು ಬದೌನ್ ಜಿಲ್ಲೆಯ ಉರೈನಾ ಗ್ರಾಮದಲ್ಲಿ ಗೋವಿಂದ ಹಾಗೂ ಆಶಾರನ್ನು ಹತ್ಯೆಗೈಯಲಾಗಿತ್ತು. ಆಶಾ ಕಿಷ್ಣಪಾಲ್‌ನ ಪುತ್ರಿ. ಗೋವಿಂದನ ತಂದೆ ಪಪ್ಪು ಸಿಂಗ್ ನೀಡಿದ ದೂರಿನ ಆಧಾರದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು.
ಗೋವಿಂದ ಹಾಗೂ ಆಶಾ ಭೇಟಿಯಾಗುವುದಕ್ಕೆ ಅವರ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಅವರಿಬ್ಬರು ದಿಲ್ಲಿಗೆ ಪರಾರಿಯಾಗಿದ್ದರು ಪ್ರಾಸಿಕ್ಯೂಷನ್ ಪರ ವಕೀಲರು ತಿಳಿಸಿದ್ದಾರೆ. ತರುವಾಯ ಜೋಡಿಯನ್ನು ವಿವಾಹ ಮಾಡಿಸುವುದಾಗಿ ನಂಬಿಕೆ ಮೂಡಿಸಿ ಉರೈನಾಕ್ಕೆ ಹಿಂದೆ ಬರುವಂತೆ ತಿಳಿಸಲಾಗಿತ್ತು. ಈ ಸಂದರ್ಭ ಕಿಷ್ಣಪಾಲ್ ಅವರ ತಲೆಗೆ ಕೊಡಲಿಯಿಂದ ಕಡಿದು ಹತ್ಯೆಗೈದಿದ್ದಾನೆ ಎಂದು ಅವರು ಹೇಳಿದ್ದಾರೆ.
ಅನಂತರ ಕುಟುಂಬ ತಮ್ಮ ಮನೆಯಿಂದ ಅವರ ಮೃತದೇಹಗಳನ್ನು ವಿಲೇವಾರಿ ಮಾಡಲು ಪ್ರಯತ್ನಿಸಿವೆ. ಆದರೆ, ಅದನ್ನು ನೆರೆಯವರು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.