ನವದೆಹಲಿ: ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ 15ನೇ ಗಸ್ತು ಕೇಂದ್ರದಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳನ್ನು ಹಿಂಪಡೆಯುವ ಮೂಲಕ ತಾರಕಕ್ಕೇರಿದ್ದ ಸಂಘರ್ಷ ಶಮನವಾಗಿದ್ದು, ಒಂದು ಸಮಸ್ಯೆ ಕಡಿಮೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.
ಜೈಶಂಕರ್ ಬುಧವಾರ ಹೇಳಿದ್ದಾರೆ.
ಫ್ರಾನ್ಸ್ ವಿದೇಶಾಂಗ ಸಚಿವೆ ಕ್ಯಾಥರೀನ್ ಕೊಲೊನಾ ಅವರ ಜತೆಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗೋಷ್ಠಿ ನಡೆಸಿದ ಜೈಶಂಕರ್, ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ರಾಷ್ಟ್ರವೊಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಡೆಯೊಡ್ಡುತ್ತಿರುವ ಬಗ್ಗೆ ಎದುರಾದ ಪ್ರಶ್ನೆಗೆ ಪರೋಕ್ಷವಾಗಿ ಚೀನಾವನ್ನು ದೂಷಿಸಿದರು.
'ಗಸ್ತು ಕೇಂದ್ರ 15ರಿಂದ ಸೇನಾ ವಾಪಸಾತಿ ಪೂರ್ಣವಾಗಿದೆ. ಗಡಿಯಲ್ಲಿನ ಒಂದು ಸಮಸ್ಯೆಯೂ ಕಡಿಮೆಯಾದಂತಾಗಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪೂರ್ವ ಲಡಾಖ್‌ನ ಗೊಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದ ಗಸ್ತು ಕೇಂದ್ರ 15ರಿಂದ ಸೋಮವಾರ ಸೇನಾ ಪಡೆಗಳನ್ನು ಹಿಂತೆಗೆದುಕೊಂಡು, ತಾತ್ಕಾಲಿಕ ಮೂಲಸೌಕರ್ಯಗಳನ್ನು ನಿಷ್ಕ್ರಿಯಗೊಳಿಸಿದ ನಂತರ ಉಭಯ ರಾಷ್ಟ್ರಗಳ ಸೇನೆಗಳು ಜಂಟಿ ಪರಿಶೀಲನೆ ನಡೆಸಿದವು.