ಕೋಲ್ಕತ್ತ: ದುರ್ಗಾಪೂಜೆಯ ಮೂರು ತಿಂಗಳು ಮುನ್ನವೇ ಕೇಂದ್ರ ಸರ್ಕಾರವು ಥರ್ಮೊಕೋಲ್ (ಪಾಲಿಸ್ಟೈರಿನ್) ಮೇಲೆ ನಿಷೇಧ ಹೇರಿರುವುದು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಮೂರ್ತಿಯ ವಿಗ್ರಹ ತಯಾರಿಸುವ ಕಲಾವಿದರನ್ನು ಸಂಕಷ್ಟಕ್ಕೆ ದೂಡಿದೆ.
ದುರ್ಗಾಪೂಜೆಯಲ್ಲಿ ಬಳಸಲಾಗುವ ಅಲಂಕಾರಿಕ ಸಾಮಗ್ರಿಗಳು, ದೇವಿಯ ಒಡವೆಗಳನ್ನು ಮಾಡಲು ಹಾಗೂ ಪೆಂಡಾಲ್‌ಗಳನ್ನು ಅಲಂಕರಿಸಲು ಕಲಾವಿದರು ಥರ್ಮೊಕೋಲ್ ಅನ್ನು ಬಳಸುತ್ತಿದ್ದಾರೆ.
'ಪರಿಸರದ ಮೇಲೆ ದುಷ್ಟರಿಣಾಮ ಬೀರುವ ವಸ್ತುಗಳ ಕುರಿತು ಸರ್ಕಾರವು ಜಾಗೃತಿ ಅಭಿಯಾನ ಆರಂಭಿಸಿ, ಥರ್ಮೊಕೋಲ್‌ಗೆ ಪರ್ಯಾಯ ಉತ್ಪನ್ನವನ್ನು ಆವಿಷ್ಕರಿಸಲು ನಿರ್ದಿಷ್ಟ ಸಮಯ ನೀಡಿದ್ದರೆ ಉತ್ತಮವಾಗಿರುತ್ತಿತ್ತು' ಎಂದು ಹಲವು ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ಜುಲೈ 1ರಿಂದ ಥರ್ಮೊಕೋಲ್ ಜೊತೆಗೆ ತಟ್ಟೆ, ಲೋಟ, ಸ್ಟ್ರಾಗಳಂತಹ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ಸಂಗ್ರಹ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.
ಥರ್ಮೊಕೋಲ್ ಸಂಶ್ಲೇಷಿತ ಪಾಲಿಮರ್ ಆಗಿದ್ದು, ಇದನ್ನು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ವಸ್ತುಗಳು ಹಾಳಾಗದಂತೆ ತಡೆಯಲು ಬಳಸಲಾಗುತ್ತಿದೆ.