ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಓಣಂ ರಜೆಯನ್ನು ಸದುಪಯೋಗಪಡಿಸಿಕೊಂಡು ಒಂದು ವಾರಗಳ ಕಾಲ " ಜಲ ವಿಹಾರ" ಎಂಬ ಈಜು ತರಬೇತಿ ನಡೆಸಲಾಯಿತು. ಸುಮಾರು 60ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ ತರಬೇತಿಯ ಪ್ರಥಮ ಹಂತದ ಸಮಾರೋಪ ಭಾನುವಾರ ಗೋಳಿಕಟ್ಟೆ ಸಮೀಪದ ಕೆರೆ ಪರಿಸರದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿ ಮಾತನಾಡಿ, ಈಜು ಮನುಷ್ಯನ ಶರೀರಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಪೂರಕ. ಬಾಲ್ಯದಿಂದಲೇ ಮಕ್ಕಳಿಗೆ ಕಲಿಸುವ ಸ್ವರ್ಗ ಶಾಲೆಯ ಶ್ರಮ ಪ್ರಶಂಸನೀಯ ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ.ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಪಂ.ಸದಸ್ಯ ರಾಮಚಂದ್ರ ಎಂ., ಶಾಲಾ ಪ್ರಬಂಧಕ ಹೃಷಿಕೇಶ್ ವಿ.ಎಸ್.ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಈಜು ತರಬೇತು ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಮುಂಡಿತ್ತಡ್ಕ ಶಾಲಾ ಶಿಕ್ಷಕ ಪ್ರಶಾಂತ್ ರೈ, ಪೆರ್ಮುದೆ ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಬಾಲಮಿತ್ರ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಮೋಹನ ಪೊಸೊಳ್ಯ ಅವರನ್ನು ಸನ್ಮಾನಿಸಲಾಯಿತು. ಈಜು ತರಬೇತಿಯ ಆಯೋಜಕ ಶಿಕ್ಷಕ ಮಿಥುನ್ ವಿ.ಆರ್ ಅವರನ್ನು ವಿದ್ಯಾರ್ಥಿಗಳು ಅವರದೇ ಚಿತ್ರ ಬಿಡಿಸಿ ಕಲಾ ಕಾಣಿಕೆಯನ್ನಿತ್ತು ಗೌರವಿಸಿದರು. ಶಾಲಾ ಶಿಕ್ಷಕ ಮಂಜುನಾಥ, ಕಲಾವತಿ, ಗೀತಾಂಜಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಇಶಾನ್ ಅವರ ಹೆತ್ತವರಾದ ಶ್ರೀಶ ಬಲೆಕ್ಕಳ ಹಾಗೂ ಶ್ರುತಿ ದಂಪತಿಗಳು ಶಾಲೆಗೆ ಸಹಾಯ ಧನ ಹಸ್ತಾಂತರಿಸಿದರು. ಮುಖ್ಯೋಪಾಧ್ಯಾಯಿನಿ ಗೀತಾ ಸ್ವಾಗತಿಸಿ, ಶಿಕ್ಷಕ ಪದ್ಮನಾಭ ಆರ್.ವಂದಿಸಿದರು. ವೆಂಕಟ ವಿದ್ಯಾಸಾಗರ್ ಕಾರ್ಯಕ್ರಮ ನಿರೂಪಿಸಿದರು.