ನವದೆಹಲಿ: 'ಜಲ್ಲಿಕಟ್ಟು' ಸ್ಪರ್ಧೆಗೆ ಅವಕಾಶ ನೀಡಿ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 22ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
'ಜಲ್ಲಿಕಟ್ಟು' ಸ್ಪರ್ಧೆಗೆ ಅವಕಾಶ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರ ಪರ ವಕೀಲ ಆನಂದ್ ಗ್ರೋವರ್ ಅವರು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳಿರುವ ಪೀಠದ ಮುಂದೆ ವಾದ ಮಂಡಿಸಿದರು.
ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದನ್ನು ತಡೆಯುವ ಕಾಯ್ದೆ (ತಮಿಳುನಾಡು ತಿದ್ದುಪಡಿ) 2017 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು ಸಂವಿಧಾನದ ವ್ಯಾಖ್ಯಾನದ ಬಗ್ಗೆ ಹಲವು ಪ್ರಮುಖ ಪ್ರಶ್ನೆಗಳಿವೆ. ಆದ್ದರಿಂದ ಈ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠ ನಡೆಸಬೇಕು ಎಂದು ಹೇಳಿತ್ತು. ಈ ಸಂಬಂಧ ತೀರ್ಪು ನೀಡುವಂತೆ ಐದು ಪ್ರಶ್ನೆಗಳನ್ನು ವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್ ನೀಡಿತ್ತು. ಪ್ರಾಣಿ ಹಕ್ಕುಗಳ ಸಂಸ್ಥೆ ಪೇಟಾ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.