ಪೆರ್ಲ :ವಿದ್ಯಾರ್ಥಿ ವಲಯದಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಾಮೋಹ ಸಮಾಜದಲ್ಲಿ ಆತಂಕಕ್ಕೆ ಕಾರಣವಾಗಿರುವುದಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ರಾಜೇಂದ್ರ ತಿಳಿಸಿದ್ದಾರೆ.
ಅವರು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ನಿರ್ದೇಶಾನುಸಾರ ಸಮಗ್ರ ಶಿಕ್ಷಾ ಕೇರಳದ ಕುಂಬಳೆ ಬಿಆರ್‍ಸಿ ಮಟ್ಟದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಸಭಾಂಗಣದಲ್ಲಿ ಮಾದಕ ದ್ರವ್ಯ ವಿರುದ್ಧ ಅಭಿಯಾನದ ಅಂಗವಾಗಿ ಆಯೋಜಿಸಲಾದ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಮಾದಕ ಪದಾರ್ಥ ಮಿಶ್ರಿತ ಸಿಹಿ ತಿನಿಸುಗಳ ಮಾರಾಟದಿಂದ ಭವಿಷ್ಯದಲ್ಲಿ ಸಮಾಜವನ್ನು ಅಮಲುಪದಾರ್ಥದ ದಾಸ್ಯದೆಡೆಗೆ ತಳ್ಳುವ ಗೂಢ ಸಂಚು ನಡೆಯುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಸೇರಿದಂತೆ ಇಡೀ ಸಮಾಜ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶೀಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಸಂಪನ್ಮೂಲ ವ್ಯಕ್ತಿಗಳಾದ ಶಿವರಾಮ ಎ, ಶಶಿಧರ ಪಿ.ಕೆ ಉಪಸ್ಥಿತರಿದ್ದರು. ಕುಂಬಳೆ ಬಿಆರ್‍ಸಿ ಸಿಆರ್‍ಸಿಸಿ ಸುಪ್ರಿಯಾ ಕುಮಾರಿ ಕೆ.ಎಚ್. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸುರೇಶ್ ಎ. ವಂದಿಸಿದರು. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಾಮೋಹ ವಿರುದ್ಧ ಸಂಪನ್ಮೂಲ ವ್ಯಕ್ತಿಗಳಾದ ಶಿವರಾಮ ಎ ಹಾಗೂ ಶಶಿಧರ ಪಿ.ಕೆ ತರಗತಿ ನಡೆಸಿದರು.
ವಿದ್ಯಾರ್ಥಿ ವಲಯದಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಸನ ಆತಂಕಕಾರಿ: ಬಿ.ರಾಜೇಂದ್ರ
0
ಸೆಪ್ಟೆಂಬರ್ 28, 2022
Tags