ನವದೆಹಲಿ: ಹಳೆಯ ಕಾರುಗಳ ಮಾರಾಟಕ್ಕೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಗ್ರಾಹಕರ ರಕ್ಷಿಸುವ ಮತ್ತು ವಾಹನಗಳ ಮರುಮಾರಾಟವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮಗಳನ್ನು ಅನುಷ್ಠಾನಕ್ಕೆ ನಿರ್ಧರಿಸಿದೆ.
ವಾಹನಗಳ ಮರುಮಾರಾಟದಲ್ಲಿ ತೊಡಗಿರುವ ಮಧ್ಯವರ್ತಿಗಳು ಮಾರಾಟ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಾಹನವನ್ನು ಮರುಮಾರಾಟಕ್ಕಾಗಿ ತೆಗೆದುಕೊಂಡ ಕ್ಷಣದಲ್ಲೇ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ. ಜತೆಗೆ ಮಧ್ಯವರ್ತಿಗಳು ತಾವು ವ್ಯವಹಾರ ನಡೆಸುವ ಸಂಸ್ಥೆಯ ಹೆಸರನ್ನು ರಾಜ್ಯ ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದರ ನಂತರ ಮರು ಮಾರಾಟಗಾರನಿಗೆ ಲೈಸೆನ್ಸ್ ನೀಡಲಾಗುತ್ತದೆ. ಮರು ಮಾರಾಟಗಾರ (ರೀ-ಸೆಲ್ಲರ್) ಡೀಲರ್ಶಿಪ್ ನಿಯಮಗಳನ್ನು ಉಲ್ಲಂಘಿಸಿದರೆ ಲೈಸೆನ್ಸ್ ರದ್ದುಗೊಳಿಸಿ, ದಂಡದ ನಿಬಂಧನೆಗಳನ್ನು ಸಹ ಜಾರಿಗೆ ತರಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೀಲರ್ಶಿಪ್ನಲ್ಲಿ ವಾಹನ ಮಾರಾಟ ಮಾಡಲು ನೋಂದಾಯಿಸಿದ ನಂತರ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಡೀಲರ್ ಮಾತ್ರ ಜವಾಬ್ದಾರಿಯಾಗಿರುತ್ತಾನೆ ಎಂದು ಪ್ರಸ್ತಾವಿತ ನಿಯಮದಲ್ಲಿ ಹೇಳಲಾಗಿದೆ.
ಹೊಣೆಗಾರಿಕೆ ನಿಗದಿ: ಬಳಸಿದ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ಹಕ್ಕುಗಳನ್ನು ರಕ್ಷಿಸುವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆ. ಜತೆಗೆ ಬಳಸಿದ ವಾಹನವನ್ನು ಖರೀದಿಸಿದ ಮಾಲೀಕ ಸಾರಿಗೆ ನಿಯಮ ಉಲ್ಲಂಘಿಸಿದ್ದರೂ, ಆ ವಾಹನದ ಹಳೆಯ ಮಾಲೀಕನಿಗೆ ದಂಡದ ರಸೀದಿ ನೀಡಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಪ್ರಸ್ತಾವಿತ ನಿಯಮದಲ್ಲಿ ವಾಹನಗಳನ್ನು ಮರು ಮಾರಾಟ ಮಾಡುವಾಗ ಹೊಸ ಮಾಲೀಕತ್ವದ ವಿವರಗಳನ್ನು ನವೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಡೀಲರ್ ಜವಾಬ್ದಾರಿಯಾಗಿರುತ್ತದೆ. ಪ್ರಸ್ತುತ ಅಂತಹ ಯಾವುದೇ ನಿಯಮಾವಳಿಗಳಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
35 ಲಕ್ಷ ಹಳೇ ಕಾರು ಮಾರಾಟ: ಭಾರತದಲ್ಲಿ 2022ರ ಆರ್ಥಿಕ ವರ್ಷದಲ್ಲಿ 35 ಲಕ್ಷ ಬಳಸಿದ ಕಾರುಗಳ ಮಾರಾಟವಾಗಿದೆ. ಇದು ಹಿಂದಿನ ವರ್ಷದ ದಾಖಲೆಯನ್ನು ಮೀರಿಸಿದೆ. ಓಎಲ್ಎಕ್ಸ್ ಆಟೋಸ್-ಸಿಆರ್ಐಎಸ್ಐಎಲ್ ಕಳೆದ ವರ್ಷ ನಡೆಸಿದ ಅಧ್ಯಯನದಲ್ಲಿ 2026ರ ಆರ್ಥಿಕ ವರ್ಷದ ವೇಳೆಗೆ 70 ಲಕ್ಷಕ್ಕೂ ಹೆಚ್ಚು ಬಳಸಿದ ಕಾರುಗಳ ಮಾರಾಟವಾಗಲಿದೆ ಎಂದು ಹೇಳಲಾಗಿದೆ.