ಲಖನೌ: ಜ್ಞಾನ ವಾಪಿ ಮಸೀದಿ ಆವರಣದಲ್ಲಿ ಇದೆ ಎಂದು ಹೇಳಲಾದ ಶೃಂಗಾರ ಗೌರಿ ದೇವಾಲಯದಲ್ಲಿ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ ಎಂದು ಎಎನ್‌ಐ ಟ್ವೀಟಿಸಿದೆ.
'ಶೃಂಗಾರ ಗೌರಿ ಪೂಜೆಗೆ ಅವಕಾಶ ಕೋರಿ ಹಿಂದೂಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವಾಗಿದೆ' ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ವಿಶ್ವಾಸ್ ಹೇಳಿದ್ದಾರೆ. ಇದೇವೇಳೆ, 'ಹಿಂದೂಗಳ ಅರ್ಜಿಗೆ ಪ್ರತಿಯಾಗಿ ಮುಸ್ಲಿಮರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ' ಎಂದು ಹಿಂದೂಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
'ಈ ಕುರಿತಂತೆ ಮುಸಲ್ಮಾನರ ಪರ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿರುವ ಸಾಧ್ಯತೆ ಇದೆ' ಎಂದು ವಕೀಲ ಸೋಹನ್ ಲಾಲ್ ಆರ್ಯ 'ಇಂಡಿಯಾ ಟುಡೆ'ಗೆ ತಿಳಿಸಿದ್ದಾರೆ
'ಇದು ಹಿಂದೂ ಸಮುದಾಯದ ಜಯವಾಗಿದೆ. ಇದು ಜ್ಞಾನವಾಪಿ ದೇಗುಲ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಸೆಪ್ಟೆಂಬರ್ 22ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ' ಎಂದು ಲಾಲ್ ಆರ್ಯ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಮಸೀದಿಯ ಹೊರ ಗೋಡೆಯೊಂದರ ಬಳಿ ಹಿಂದೂ ದೇವತೆಗಳ ವಿಗ್ರಹಗಳಿವೆ. ಅವುಗಳಿಗೆ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಧರ್ಮಕ್ಕೆ ಸೇರಿದ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರು ಈ ಪ್ರಕರಣದ ತೀರ್ಪನ್ನು ಸೆ.12 ರವರೆಗೆ ಕಾಯ್ದಿರಿಸಿ ಆಗಸ್ಟ್ 24ರಂದು ತೀರ್ಪು ನೀಡಿದ್ದರು. ಇದಕ್ಕೂ ಮೊದಲು, ಮಸೀದಿಯ ಆವರಣದಲ್ಲಿ ವಿಡಿಯೊಗ್ರಫಿ ಸಮೀಕ್ಷೆ ನಡೆಸಲು ಕೋರ್ಟ್ ಆದೇಶಿಸಿತ್ತು. ಈಗಾಗಲೇ ಸಮೀಕ್ಷೆಯ ವರದಿಯನ್ನು ಕೋರ್ಟ್‌ಗೆ ನೀಡಲಾಗಿದೆ.