ಕಾಸರಗೋಡು: ಅಡಕೆಗೆ ಬೆಲೆಯಿದ್ದರೂ, ನಿರಂತರ ಕಾಡುತ್ತಿರುವ ರೋಗಬಾಧೆಯಿಂದ ಕಂಗಾಲಾಗಿರುವ ಕೃಷಿಕರನ್ನು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಡಕೆ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಚಿಂತನೆಗೆ ಹಚ್ಚುವಂತೆ ಮಾಡಿತು.
ಅಡಕೆಗೆ ಉತ್ತಮ ಧಾರಣೆಯಿದ್ದರೂ, ಅಡಕೆಯ ಕಾಯಿಕೊಳೆರೋಗ, ಹಿಂಗಾರ ಒಣಗುವುದು, ಎಲೆ ಚುಕ್ಕೆ ರೋಗ, ಸಣ್ಣ ಅಡಕೆ ಉದುರುವಿಕೆ ಹೀಗೆ ನಾನಾ ರೋಗಗಳು ಕೃಷಿಕರನ್ನು ಕಂಗಾಲಾಗಿಸಿದೆ. ಅಡಕೆಯ ಶಿಲೀಂಧ್ರ ರೋಗಗಳ ನಿಯಂತ್ರಣ ಸಾಧ್ಯವಾಗದೆ ಕೆಲವೆಡೆ ಇಳುವರಿ ಸಂಪೂರ್ಣ ಕುಸಿತ ಕಂಡಿದೆ. ಇನ್ನೊಂದೆಡೆ ಪೋಷಕಾಂಶ ನಿರ್ವಹಣೆ ಬಗ್ಗೆಯೂ ಸೂಕ್ತ ಮಾಹಿತಿಯಿಲ್ಲದಾಗಿದೆ. ಅಡಕೆ ಕೃಷಿಕರು ಇಂದು ಗೊಂದಲಗಳ ನಡುವೆ ಜೀವನ ಸಾಗಿಸುವ ಸ್ಥಿತಿಯಿದ್ದು, ವಿಚಾರಗೋಷ್ಠಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಯಿತು. ಕಾಸರಗೋಡು ಸಿಪಿಸಿಆರ್‍ಐನ ನ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ. ರವಿ ಭಟ್ ಮಾತನಾಡಿ, ಕೃಷಿಕರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ತೋಟಗಳಿಗೆ ಖುದ್ದಾಗಿ ತೆರಳಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರಿಂದ ಕೃಷಿಕರಿಗೆ ಹಾಗೂ ಕೃಷಿವಿಜ್ಞಾನಿಗಳಿಗೆ ಪರಸ್ಪರ ಸಹಾಯವಾಗುವುದು. ಇದರಿಂದ ಕೃಷಿಕರೊಂದಿಗಿನ ವಿಜ್ಞಾನಿಗಳಿಗಳ ಸಂಬಂಧ ಬಲಗೊಳ್ಳುವುದರ ಜತೆಗೆ ತಮ್ಮ ವೃತ್ತಿಜೀವನದಲ್ಲಿ ಉನ್ನತಿಗೇರಲೂ ಇದು ಸಹಕಾರಿಯಾಗಲಿದೆ. ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಮತ್ತು ವಿಜ್ಞಾನಿಗಳ ಸಮಾಲೋಚನೆ, ಸಂವಾದ ಕಾರ್ಯ ಮುಂದುವರಿಯಲಿರುವುದಾಗಿ ತಿಳಿಸಿದರು.
ಪೋಷಕಾಂಶ ನೀಡುವಿಕೆ ಹಾಗೂ ಅಡಕೆ ಕೃಷಿಗೆ ಕಾಡುವ ರೋಗಕ್ಕೆ ಪರಸ್ಪರ ಸಂಬಂಧವಿದೆ. ಪೋಷಕಾಂಶದ ಕೊರತೆಯೂ ಸಸಿಗಳಿಗೆ ಮಾರಕವಾಗಿ ಪರಿಣಮಿಸಲಿರುವುದಾಗಿ ವಿಟ್ಲ ಸಿಪಿಸಿಆರ್‍ಐನ ಯುವ ವಿಜ್ಞಾನಿ ಡಾ. ಭವಿಷ್ಯ ಮಾಹಿತಿ ನೀಡಿದರು. ಮಣ್ಣು ಪರೀಕ್ಷೆಯ ಜತೆಗೆ ತೋಟಗಳ ನಿರ್ವಹಣೆಯೂ ಅಷ್ಟೇ ಮಹತ್ವದ್ದಾಗಿದೆ.ಇನ್ನು ಗೊಬ್ಬರ ನೀಡುವಿಕೆಯಲ್ಲೂ ಸಮತೋಲನ ಕಾಪಾಡುವುದು ಅಗತ್ಯ. ಗೊಬ್ಬರದ ಪ್ರಮಾಣದಲ್ಲಿ ಏರುಪೇರಾದರೂ, ಇದು ಇಳುವರಿಯನ್ನು ಬಾಧಿಸುತ್ತದೆ. ಅಡಕೆಗೆ ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಗೊಬ್ಬರ ನೀಡಬೇಕು, ಗೊಬ್ಬರ ನೀಡುವಾಗ ಸೂಕ್ಷ್ಮಾಣು ಜೀವಿಗಳನ್ನು ಉಳಿಸಿಕೊಳ್ಳುವಂತೆ ಮಾಡುವುದು, ಮಣ್ಣಿನ ಆಮ್ಲೀಯತೆಗನುಸಾರ ಸುಣ್ಣ ಒದಗಿಸುವುದು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಅಡಕೆಯ ಹಿಂಗಾರ ಒಣಗುವ ರೋಗ, ಎಲೆಚುಕ್ಕೆ, ಬುಡಕೊಳೆ ಮತ್ತಿತರ ಶಿಲೀಂಧ್ರ ರೋಗಗಳ ಸಮಗ್ರ ನಿರ್ವಹಣೆ ವಿಷಯದ ಬಗ್ಗೆ ಡಾ. ಪ್ರತಿಭಾ ವಿ.ಎಚ್ ಕೃಷಿಕರಿಗೆ ಮಾಹಿತಿ ನೀಡಿದರು. ಕೊಳೆರೋಗಕ್ಕೆ ಬೋರ್ಡೋ ಮಿಶ್ರಣ ಹೆಚ್ಚು ಪರಿಣಾಮಕಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುವ ನಾನಾ ಕೀಟನಾಶಕಗಳ ಬಗ್ಗೆ ಕೃಷಿಕರು ಜಾಗರೂಕರಗಿರುವಂತೆ ಕಿವಿಮಾತು ಹೇಳಿದರು. ಹಿಂಗಾರ ಒಣಗುವ ರೋಗ ಕೃಷಿಕರನ್ನು ಅತಿಯಾಗಿ ಕಾಡುತ್ತಿದ್ದು, ಶಿಲೀಂಧ್ರದ ನಿಯಂತ್ರಣದಿಂದ ಇದನ್ನು ಹತೋಟಿಗೆ ತರಬಹುದು. ಶಿಲೀಂಧ್ರ ನಾಶಗೊಳಿಸಲು ಅಗತ್ಯವಿರುವ ಔಷಧದ ಜತೆಗೆ ರೋಗಬಾಧಿತ ಹಿಂಗಾರವನ್ನು ತೆರವುಗೊಳಿಸುವುದೂ ಇನ್ನೊಂದು ಮಾರ್ಗೋಪಾಯವಾಗಿದೆ ಎಂದು ತಿಳಿಸಿದರು.
ಇದೇ ವಿಷಯದಲ್ಲಿ ಇನ್ನೊಬ್ಬ ವಿಜ್ಞಾನಿ ಡಾ. ತವಪ್ರಕಾಶ್ ಪಾಂಡ್ಯನ್ ಮಾಹಿತಿ ನೀಡಿದರು.
ಕಂತುಗಳಲ್ಲಿ ಗೊಬ್ಬರ ನೀಡಿಕೆ-ಕೃಷಿಕಾನುಭವದ ಬಗ್ಗೆ ಶಿವಪ್ರಕಾಶ್ ಪಾಲೆಪ್ಪಾಡಿ, ನ್, ಅಡಕೆ ತೋಟದಲ್ಲಿ ಸ್ವಚ್ಛತೆಯ ಮಹತ್ವದ ಕೃಷಿಕಾನುಭವದ ಬಗ್ಗೆ ಡಾ. ವೇಣುಗೋಪಾಲ್ ಕಳೆಯತ್ತೋಡಿ ಅನುಭವ ಹಂಚಿಕೊಂಡರು. ಈ ಸಂದರ್ಭ ನಡೆದ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಕೃಷಿಕ ಶ್ರೀಪಡ್ರೆ ಸಮನ್ವಯಕಾರರಾಗಿ ಸಹಕರಿಸಿದರು.