ನವದೆಹಲಿ: ರಸ್ತೆ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ಕಾರುಗಳಲ್ಲಿ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಅಳವಡಿಸುವಂತೆ ವಾಹನ ತಯಾರಿಕಾ ಕಂಪೆನಿಗಳಿಗೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ACMA) ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿ ದೇಶದಲ್ಲಿ ಪ್ರತಿವರ್ಷ 5 ಲಕ್ಷದಷ್ಟು ವಾಹನ ಅಪಘಾತದಿಂದ, 1.5 ಲಕ್ಷದಷ್ಟು ಜನರು ಸಾಯುತ್ತಿದ್ದಾರೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಣ್ಣ ಕಾರುಗಳನ್ನು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಉತ್ಪಾದಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಕಾರಿನಲ್ಲೂ 6 ಏರ್ಬ್ಯಾಗ್ ಇರಬೇಕು. ಆದರೆ ಅಧಿಕ ವೆಚ್ಚದ ಕಾರಣದಿಂದ ಕಾರು ಉತ್ಪಾದನಾ ಕಂಪೆನಿಗಳು ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸಲು ಹಿಂದೇಟು ಹಾಕುತ್ತಿವೆ. ಭಾರತದಲ್ಲಿನ ಮಧ್ಯಮ ವರ್ಗದ ಕುಟುಂಬಗಳು ಸಣ್ಣ ಕಾರುಗಳಿಗೆ ಅವಲಂಬಿತರಾಗಿದ್ದಾರೆ. ಈಗಾಗಲೇ ಎಲ್ಲಾ ಕಾರುಗಳ ಮುಂಭಾಗದಲ್ಲಿ ಏರ್ಬ್ಯಾಗ್ ಲಭ್ಯವಿದೆ. ಆದರೆ ಹಿಂದಿನ ಭಾಗಕ್ಕೆ ಏರ್ಬ್ಯಾಗ್ ಅಳವಡಿಸಿದಾಗ ಕಾರು ಉತ್ಪಾದನಾ ವೆಚ್ಚ ಅಧಿಕವಾಗುತ್ತದೆ. ಇದು ಮಧ್ಯಮ ವರ್ಗದ ಮಂದಿಗೆ ಕಾರು ಖರೀದಿಯ ವೇಳೆ ಹೊರೆಯಾಗುತ್ತದೆ ಎಂದು ಕಂಪೆನಿಗಳು ಹೇಳುತ್ತಿವೆ. ಜನರ ಜೀವದ ಸುರಕ್ಷತೆಯ ಬಗ್ಗೆ ಕಾರು ಉತ್ಪದನಾ ಕಂಪೆನಿಗಳು ಯಾಕೆ ಗಮನ ನೀಡುತ್ತಿಲ್ಲ ಎಂದು ಸಚಿವ ಗಡ್ಕರಿ ಪ್ರಶ್ನಿಸಿದ್ದಾರೆ.
ಅಫಘಾತವನ್ನು ಇಳಿಮುಖವಾಗಿಸಲು ಹೆಚ್ಚಿನ ಸುರಕ್ಷತೆಯ ಕಾರುಗಳನ್ನು ಉತ್ಪಾದಿಸಬೇಕಿದೆ. ಇದಕ್ಕಾಗಿ ಕಾರು ಉತ್ಪಾದನಾ ಕಂಪೆನಿಗಳು ಆರೋಗ್ಯಕರ ಪೈಪೋಟಿ ನಡೆಸಬೇಕು. ಅಕ್ಟೋಬರ್ ವೇಳೆಗೆ 8 ಸೀಟಿನ ಕಾರುಗಳಲ್ಲಿ 6 ಏರ್ಬ್ಯಾಗ್ ಇರುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.