HEALTH TIPS

ಕಲೆ ಧಾರ್ಮಿಕತೆಯ ಒಂದು ಅಂಗ: ಅದಮಾರು ಶ್ರೀ: ಎಡನೀರು ಶ್ರೀಗಳ ಚಾತುರ್ಮಾಸ್ಯ ಮಂಗಲೋತ್ಸವದ ಸಮಾರೋಪ ಸಮಾರಂಭದಲ್ಲಿ ಅಭಿಮತ


              ಬದಿಯಡ್ಕ: ಧರ್ಮದಲ್ಲಿ ನಡೆಯುವುದು ಶ್ರೇಯಸ್ಕರ. ಆದರೆ ಧರ್ಮವನ್ನು ತಿಳಿದುಕೊಳ್ಳುವ ಹಾದಿ ಕಷ್ಟಕರವಾದುದು.  ಮಠ ಮಂದಿರಗಳು ಧರ್ಮದ ಬಗ್ಗೆ ತಿಳುವಳಿಕೆಯನ್ನು ನೀಡುವ ಕೇಂದ್ರವಾಗಿದ್ದು, ಕಲೆಯೂ ಧಾರ್ಮಿಕ ಕ್ಷೇತ್ರದ ಒಂದು ಅಂಗವಾಗಿದೆ ಎಂದು ಉಡುಪಿ ಅದಮಾರು ಮಠದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿದರು.
           ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯ ವ್ರತ ಮಂಗಲೋತ್ಸವದ ಸಮಾರೋಪ ಸಮಾರಂಭವನ್ನು ಶನಿವಾರ ದೀಪಬೆಳಗಿಸಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
         ಸಮಾರೋಪ ಎಂದರೆ ನನ್ನದಲ್ಲ ಎಲ್ಲವೂ ನಿನ್ನದೆಂಬ ಕಲ್ಪನೆಯೊಂದಿಗೆ ಭಗವಂತನಲ್ಲಿ ಸಮರ್ಪಣೆ ಮಾಡುವುದಾಗಿದೆ. ಸಂಧ್ಯಾಕಾಲಗಳಲ್ಲಿ ದೇವರ ಚಿಂತನೆ, ನಾಮಸ್ಮರಣೆಯನ್ನು ನಿರಂತರ ಮಾಡಬೇಕು. ಯಾವ ಕ್ರಿಯೆ, ವಾಕ್ಯಗಳು ಸಜ್ಜನರಿಗೆ ನೆಮ್ಮದಿ ನೀಡುವುದೋ ಅದುವೇ ಧರ್ಮವಾಗಿದೆ. ಚಿಂತನೆ ಮಾಡಿ ದಾನ ಧರ್ಮಗಳನ್ನು ಮಾಡಬೇಕು. ನಮ್ಮ ಆಧುನಿಕ ಗ್ರಂಥಗಳನ್ನು ಮನನಮಾಡಿಕೊಳ್ಳಬೇಕು. ಸಂಸ್ಕøತದ ಭಗವಂತನ ನಾಮಗಳನ್ನು ಯಾರಿಗೂ ಹೇಳಬಹುದು. ಅಲ್ಲಿ ಒಂದೊಂದು ಅಕ್ಷರಗಳನ್ನೂ ವ್ಯಾಖ್ಯಾನಿಸಬಹುದಾಗಿದೆ. ಸನ್ಯಾಸದ ಮೂಲ ಉದ್ದೇಶವನ್ನು ಸಾರ್ಥಕಪಡಿಸಿಕೊಳ್ಳುತ್ತಿರುವ ಶ್ರೀಪಾದಂಗಳವರು ಹಿರಿಯ ಗುರುಗಳಂತೆ ಕಲೆಯ ಮೂಲಕ ಧಾರ್ಮಿಕ ವಿಚಾರಗಳನ್ನು ಜನತೆಗೆ ತಲುಪಿಸುತ್ತಿದ್ದಾರೆ. ಈ ರೀತಿಯ ವೇದಿಕೆಗಳು ಜನರಿಗೆ ತತ್ವಗಳನ್ನು ತಲುಪಿಸುತ್ತವೆ. ವೇದರಕ್ಷಣೆಯೆಂಬ ಚಿಂತನೆಯಿಂದ ವ್ಯಕ್ತಿ ಎತ್ತರಕ್ಕೇರಲು ಸಾಧ್ಯ. ಸಮಾಜದಲ್ಲಿರುವ ಗೊಂದಲಗಳನ್ನು ನಿವಾರಿಸಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಬೇಕು. ಜೀವಕ್ಕೆ ಶರೀರವೇ ಮನೆ, ಆ ಶರೀರವನ್ನು ಜ್ಞಾನಪ್ರಾಪ್ತಿಗಾಗಿ ಬಳಸಿಕೊಳ್ಳಬೇಕು. ಜ್ಞಾನಕ್ಕಿಂತ ದೊಡ್ಡ ದಕ್ಷಿಣೆ ಬೇರಿಲ್ಲ. ಜ್ಞಾನವನ್ನು ಪಡೆದು ದರ್ಮವನ್ನು ಕಟ್ಟಿಕೊಳ್ಳಬೇಕು ಎಂದು ನುಡಿದರು.



             ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿ, ಮನೆಮನೆಗಳಲ್ಲಿ ಪರಂಪರೆಯ ಆಚರಣೆ, ನಂಬಿಕೆಗಳನ್ನು ಪುನರುಜ್ಜೀವನಗೊಳಿಸಬೇಕು. ವಿವಿಧ ರೀತಿಯ ಕಲೆಗಳು ಇಲ್ಲಿ ಸಾಕಾರಗೊಂಡಿದ್ದು, ಸಾಂಸ್ಕೃತಿಕ ಯಜ್ಞ ಇಲ್ಲಿ ನಡೆದಿದೆ. ಸಂಗೀತ, ಭಜನೆ, ಹರಿಕಥೆ, ಗಮಕ, ಯಕ್ಷಗಾನ ಮೊದಲಾದ ಕಲೆಗಳು ದೇವರ ಗುಣಗಾನವನ್ನು ಮಾಡುವ ಕಲೆಗಳಾಗಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ಕ್ಷೇತ್ರಕಲೆಗಳೆಂದು ಮನ್ನಿಸುತ್ತಿದ್ದೇವೆ. ಪರ್ವದಿನಗಳಲ್ಲಿ ಕಲೆಗಳು ಪ್ರದರ್ಶನಗೊಳ್ಳುವುದರಿಂದ ಕಲೆಯೂ, ಧಾರ್ಮಿಕತೆಯೂ ಬೆಳೆಯುತ್ತದೆ. ಕಲೆಯ ಮೂಲಕ ಧಾರ್ಮಿಕ ಪ್ರಜ್ಞೆಯು ಮುಂದಿನ ತಲೆಮಾರಿಗೆ ಮುಟ್ಟಿಸುವಲ್ಲಿ ಕಾರಣವಾಗುತ್ತದೆ. ಕ್ಷೇತ್ರ ಕಲೆಗಳಿಗೆ ಪೆÇ್ರೀತ್ಸಾಹ ಲಭಿಸಬೇಕು ಎಂದರು.
            ಕಟೀಲು ಶ್ರೀ ಕ್ಷೇತ್ರದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದು ಮಾತನಾಡಿ, ದೇವರು ಯೋಗನಿದ್ರೆಯಲ್ಲಿರುವ ಸಂದರ್ಭದಲ್ಲಿ ನಾವು ದೇವರ ನಾಮಸ್ಮರಣೆಯನ್ನು ಮಾಡುತ್ತಿರಬೇಕು. 2 ತಿಂಗಳ ಕಾಲ ಕೃಷ್ಣನ ಪ್ರೇರಣೆಯಿಂದ ಇಲ್ಲಿ ಮಂಗಲಕರವಾಗಿ ಸಮಾಜಕ್ಕೆ ನೀಡಲ್ಪಟ್ಟಿದೆ ಎಂದರು.
           ಚೆರ್ಕಳ ಮಾರ್ಥೋಮ ಸ್ಕೂಲ್ ಆಫ್ ಡಫ್ & ಡಂಬ್ ಧರ್ಮಗುರು ರೆ|ಫಾ| ಮಾಥ್ಯೂ ಬೇಬಿ ಮಾತನಾಡಿ 2 ತಿಂಗಳ ಕಾಲ ನಡೆದ ಚಾತುರ್ಮಾಸ್ಯ ವ್ರತದ ನಂತರ ಶ್ರೀಗಳು ಇನ್ನಷ್ಟು ಪ್ರಭಾವಿಯಾಗಿ ಹೊರಹೊಮ್ಮಲಿದ್ದಾರೆ ಎಂದರು. ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಶುಭಹಾರೈಸಿದರು. ಚಾತುರ್ಮಾಸ ಸಮಿತಿಯ ಅಧ್ಯಕ್ಷ ಟಿ ಶಾಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಶ್ರೀಕ್ಷೇತ್ರದಲ್ಲಿ ಲಭಿಸಿದೆ. ಚಾತುರ್ಮಾಸ್ಯವು ಸಂಭ್ರಮದಿಂದ ಯಶಸ್ವಿಯಾಗಿ ನಡೆದಿರುವುದು ನಮಗೆಲ್ಲಾ ಖುಷಿಯನ್ನು ತಂದುಕೊಟ್ಟಿದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ಕೆ ನಾಯಕ್ ಸ್ವಾಗತಿಸಿ, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಕಹಳೆ ವಾಹಿನಿಯ ಮುಖ್ಯಸ್ಥ ಶಾಮ್‍ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.


           ಧರ್ಮಗಳು ಬೇರೆ ಬೇರೆ ಇರಬಹುದು. ಅದು ದೇವರನ್ನು ಕಾಣಲು ಅವರವರು ಹಾಕಿಕೊಂಡ ದಾರಿ. ನಾವು ನಂಬಿದ ಧರ್ಮದ ಮೂಲಕ ದೇವರನ್ನು ಕಾಣಬೇಕು. ನಮ್ಮ ಧರ್ಮವನ್ನು ಪಾಲಿಸಿಕೊಂಡು ನಮ್ಮ ಧರ್ಮದಲ್ಲಿ ಬದುಕಬೇಕು, ಬಾಳಬೇಕು. ಇನ್ನೊಂದು ಧರ್ಮವನ್ನು ಕೂಡಾ ಪ್ರೀತಿಸಿ ಗೌರವಿಸಬೇಕು.
               - ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಎಡನೀರು ಮಠ

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries