ನವದೆಹಲಿ: ಅವಿನಾಶ್ ಯಾದವ್ (45) 2020 ರಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿ ವಾರಕ್ಕೆ ಮೂರು ಬಾರಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೊನೆಯ ಹಂತದ ಮೂತ್ರಪಿಂಡ ಸಮಸ್ಯೆ (ಇಎಸ್ ಆರ್ ಡಿ) ಕಾಡುತ್ತಿತ್ತು. ಅವರ ಪತ್ನಿ ಮಮತಾ ಯಾದವ್ ಅವರು ಪತಿಗಾಗಿ ತಮ್ಮ ಕಿಡ್ನಿ ನೀಡುವುದಕ್ಕೆ ಸಿದ್ಧರಿದ್ದರಾದರೂ ರಕ್ತದ ಗುಂಪು ಬೇರೆಯಾಗಿದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ.
ಆದರೆ ವಿಧಿಯ ಯೋಜನೆಯೇ ಬೇರೆ ಇತ್ತು. ಅದೃಷ್ಟವಶಾತ್, ಅವಿನಾಶ್ ಯಾದವ್ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಅದೇ ರೀತಿಯ ಸಮಸ್ಯೆಯಿಂದ ಮತ್ತೋರ್ವ ವ್ಯಕ್ತಿ ಸಂಜೀವ್ ಅವರೂ ಚಿಕಿತ್ಸೆ ಪಡೆಯುತ್ತಿದ್ದರು, ಅವರ ಪತ್ನಿಯೂ ಕಿಡ್ನಿ ನೀಡಲು ಮುಂದಾಗಿದ್ದರಾದರೂ ರಕ್ತದ ಗುಂಪು ಬೇರೆಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.
ಆದರೆ ಅಚ್ಚರಿಯೆಂಬಂತೆ ಅವಿನಾಶ್ ಪತ್ನಿಯ ಕಿಡ್ನಿ ಸಂಜೀವ್ ಅವರಿಗೂ ಸಂಜೀವ್ ಪತ್ನಿಯ ಕಿಡ್ನಿ ಅವಿನಾಶ್ ಗೂ ಹೊಂದಾಣಿಕೆಯಾಯಿತು. ಈ ಮಹಿಳೆಯರು ತಮ್ಮ-ತಮ್ಮ ಪತಿಯರಿಗೆ ಕಿಡ್ನಿ ನೀಡಲು ಸಾಧ್ಯವಾಗದೆ ಇದ್ದರೂ, ಪರಸ್ಪರರಮನೆಯವರಿಗೆ ಕಿಡ್ನಿ ನೀಡು ತಮ್ಮವರನ್ನು ಉಳಿಸಿಕೊಂಡಿದ್ದಾರೆ.
"ನಾನು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದೆ, ಮೊದಲ ಅವಕಾಶದಲ್ಲಿ ನನ್ನ ಕುಟುಂಬದವರು ಅವಕಾಶವನ್ನು ನಿರಾಕರಿಸಿದರು, ಮತ್ತೊಂದು ಪ್ರಕರಣದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾನಸಿಕವಾಗಿ ಸಿದ್ಧನಾಗಿದ್ದೆ. ಆದರೆ ವೈದ್ಯರು ನೀಡಿದ ಸುದ್ದಿಯ ಮೂಲಕ ಕಿಡ್ನಿ ಸ್ವಾಪ್ (ಪರಸ್ಪರ ಕಿಡ್ನಿ ದಾನ ಮಾಡಿಕೊಳ್ಳುವುದು) ಗೆ ಅವಕಾಶವಿದೆ ಎಂದು ತಿಳಿಯಿತು. ನನ್ನ ಪತ್ನಿಯ ರಕ್ತದ ಗುಂಪಿಗೆ ಸರಿ ಹೊಂದುವ ವ್ಯಕ್ತಿಗೆ ಕಿಡ್ನಿ ಅಗತ್ಯವಿತ್ತು, ಕಾಕತಾಳಿಯ ಎಂಬಂತೆ ನನ್ನ ರಕ್ತದ ಮಾದರಿಗೆ ಆ ಕುಟುಂಬದ ಮಹಿಳೆಯ ರಕ್ತದ ಗುಂಪು ಸರಿ ಹೊಂದುತ್ತಿತ್ತು ಎಂದು ಯಾದವ್ ಹೇಳುತ್ತಾರೆ.
ಇನ್ನೂ ಅಚ್ಚರಿ ಎಂದರೆ ಆಸ್ಪತ್ರೆಗೆ ತೆರಳಿದಾಗ ಇಬ್ಬರೂ ರೋಗಿಗಳು ದೀರ್ಘಾವಧಿಯಿಂದ ಪರಿಚಯವಿದ್ದವರೇ ಆಗಿದ್ದರು. ಸಂಜೀವ್ ಹಾಗೂ ನಾನು ಹಲವು ಬಾರಿ ಒಟ್ಟಿಗೆ ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದೆವು, ಈಗ ನಾನು ಮತ್ತು ಸಂಜೀವ್ ರಕ್ತವನ್ನು ಹಂಚಿಕೊಂಡಿದ್ದೇವೆ ಎನ್ನುತ್ತಾರೆ ಯಾದವ್,
ಈ ಪ್ರಕ್ರಿಯೆಯನ್ನು ಸ್ವಾಪ್ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಸರ್ಜರಿ (ಎಸ್ ಕೆಟಿಎಸ್) ಎನ್ನುತ್ತಾರೆ ಎಂದು ಕಿಡ್ನಿ ಕಸಿ ಮಾಡಿದ ಆಕಾಶ್ ಹೆಲ್ತ್‌ಕೇರ್ ನ ನೆಫ್ರಾಲಜಿ ಮತ್ತು ಮೂತ್ರಪಿಂಡ ಕಸಿ ವಿಭಾಗದ ಹೆಚ್ಚುವರಿ ನಿರ್ದೇಶಕರು ಮತ್ತು ಹಿರಿಯ ಸಲಹೆಗಾರರಾದ ಡಾ ವಿಕ್ರಮ್ ಕಲ್ರಾ ಹೇಳಿದ್ದಾರೆ.