ನವದೆಹಲಿ: ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯತೆ ಬಗ್ಗೆ ಪ್ರತಿಪಾದಿಸಿರುವ ಸುಪ್ರೀಂಕೋರ್ಟ್, ಶ್ವಾನಗಳ ಮೇಲಿನ ಪ್ರೀತಿ ಅಥವಾ ಕರುಣೆಯಿಂದ ಅವುಗಳಿಗೆ ಆಹಾರ ಹಾಕುವವರೇ ಕಾಲಕಾಲಕ್ಕೆ ಲಸಿಕೆಯನ್ನೂ ಹಾಕಿಸಬೇಕು.
ಜತೆಗೆ, ಈ ಬೀಡಾಡಿ ನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ, ಸಂತ್ರಸ್ತರ ಖರ್ಚು ವೆಚ್ಚಗಳನ್ನೂ ಆಹಾರ ಹಾಕುವವರೇ ಭರಿಸಬೇಕು ಎಂದು ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ಹೊರಹಾಕಿದೆ.
ಮನುಷ್ಯರ ಸುರಕ್ಷತೆ ಹಾಗೂ ಪ್ರಾಣಿಗಳ ಹಕ್ಕುಗಳ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕು. ನಮ್ಮ ನಡುವೆಯೇ ಅನೇಕ ಶ್ವಾನಪ್ರೇಮಿಗಳಿದ್ದಾರೆ. ನಾನೂ ನಾಯಿಗಳಿಗೆ ಆಹಾರ ಹಾಕುತ್ತೇನೆ. ನಾಯಿಗಳ ಮೇಲೆ ಯಾರು ಬೇಕಾದರೂ ಕಾಳಜಿ ತೋರಲಿ. ಅದಕ್ಕೆ ಅಡ್ಡಿಯೇನಿಲ್ಲ. ಪ್ರತಿನಿತ್ಯವೂ ನೀವು ಆಹಾರ ಹಾಕುವ ನಾಯಿ ಮೇಲೆ ಏನಾದರೂ ಗುರುತು ಅಥವಾ ಸಂಖ್ಯೆಯನ್ನು ಬರೆಯಬೇಕು. ಚಿಪ್ ಅಳವಡಿಸಿ ಟ್ರಾಯಕ್ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ನ್ಯಾ. ಸಂಜೀವ್ ಖನ್ನಾ ಹೇಳಿದ್ದಾರೆ. ಬೀದಿ ನಾಯಿಗಳ ಹಾವಳಿ ಹೆಚ್ಚಿರುವುದರಿಂದ ಇದಕ್ಕೊಂದು ರ್ತಾಕ ಪರಿಹಾರ ಹುಡುಕಬೇಕು ಎಂದಿರುವ ನ್ಯಾಯಪೀಠ, ಸಂಬಂಧಪಟ್ಟವರು ಸೆ.28ರ ಒಳಗಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬೇಕು ಎಂದು ಹೇಳಿದೆ.
ಒಂದೂವರೆ ಕೋಟಿ ಪ್ರಕರಣ: ಕೇರಳ, ಮುಂಬೈ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ಅನೇಕರು ಆಸ್ಪತ್ರೆ ಸೇರುವ ಘಟನೆಗಳು ಹೆಚ್ಚಾಗಿದ್ದು, ಮಕ್ಕಳ ಮೇಲೂ ನಾಯಿಗಳು ದಾಳಿ ಮಾಡುವ ಘಟನೆ ಆತಂಕ ದುಪ್ಪಟ್ಟಾಗಿಸಿದೆ. 2019ರಿಂದ ಇಲ್ಲಿಯವರೆಗೆ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಪ್ರಾಣಿ ಕಡಿತದ ಪ್ರಕರಣಗಳು ದಾಖಲಾಗಿವೆ. ಉತ್ತರಪ್ರದೇಶದಲ್ಲಿ 27,52,218, ತಮಿಳುನಾಡು- 20,70,921, ಮಹಾರಾಷ್ಟ್ರ- 15,75,606 ಮತ್ತು ಪಶ್ಚಿಮ ಬಂಗಾಳದಲ್ಲಿ 12,09,232 ಪ್ರಕರಣಗಳು ದಾಖಲಾಗಿವೆ. ಅಚ್ಚರಿ ಎಂದರೆ ಲಕ್ಷದ್ವೀಪದಲ್ಲಿ ಇದೇ ಅವಧಿಯಲ್ಲಿ ನಾಯಿ ಕಡಿತದ ಯಾವುದೇ ಪ್ರಕರಣ ಕೇಳಿಬಂದಿಲ್ಲ. 2019ರಲ್ಲಿ 72,77,523 ಪ್ರಾಣಿ ಕಡಿತ ಪ್ರಕರಣಗಳು ಕಂಡುಬಂದಿವೆ. 2020ರಲ್ಲಿ 46,33,493 ಮತ್ತು 2021ರಲ್ಲಿ 17,01,133ಕ್ಕೆ ಇಳಿದಿದೆ. ಆದಾಗ್ಯೂ, 2022ರ ಮೊದಲ ಏಳು ತಿಂಗಳುಗಳಲ್ಲಿ 14.5 ಲಕ್ಷ ಕೇಸ್ಗಳು ದಾಖಲಾಗಿವೆ. ಈ ವರ್ಷ ತಮಿಳುನಾಡಿನಲ್ಲಿ 2,51,510 ಮತ್ತು ಮಹಾರಾಷ್ಟ್ರದಲ್ಲಿ 2,31,531 ಅತಿ ಹೆಚ್ಚು ಕೇಸ್ಗಳು ಕಂಡುಬಂದಿವೆ.
ಲಖನೌ: ಉತ್ತರಪ್ರದೇಶದ ಲಖನೌನಲ್ಲಿ ನೆರೆಮನೆ ನಿವಾಸಿಯ ಮಮಾಂರ್ಗವನ್ನು ನಾಯಿ ಕಚ್ಚಿದೆ. ಈ ಪ್ರಕರಣದ ಸಂಬಂಧ ನಾಯಿಯ ಮಾಲೀಕ ಶಂಕರ್ ಪಾಂಡೆಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 'ಸೆಪ್ಟೆಂಬರ್ 3ರ ರಾತ್ರಿ ತಾನು ಮನೆಗೆ ಮರಳುತಿದ್ದ ವೇಳೆ ಪಾಂಡೆ ಮನೆ ಸಮೀಪಿಸಿದಾಗ ಆತನ ನಾಯಿ ತನ್ನ ಖಾಸಗಿ ಅಂಗವನ್ನು ಕಚ್ಚಿತು' ಎಂದು ಸಂತ್ರಸ್ತ ಸಂಕಲ್ಪ್ ನಿಗಮ್ ದೂರು ನೀಡಿದ್ದ. ಆದರೆ, ಪಾಂಡೆ ತನಗೆ ಯಾವುದೇ ನೆರವು ಒದಗಿಸಲಿಲ್ಲ ಎಂದು ನಿಗಮ್ ಆರೋಪಿಸಿದ್ದ. ನಾಯಿ ಕಚ್ಚಿದ ನಂತರ ಹೇಗೋ ಮನೆ ತಲುಪಿದ ನಿಗಮ್ನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯೊಂದರಲ್ಲಿಯೇ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿದ್ದು, ವಾರ್ಷಿಕ ಸರಾಸರಿ 14 ಸಾವಿರಕ್ಕೂ ಅಧಿಕ ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ. ಆಹಾರ ಮತ್ತು ಇತರೆ ಕಾರಣಗಳಿಗಾಗಿ ಬೀದಿಗಳಲ್ಲಿ ಹೋಗುವ ಮಕ್ಕಳು, ಒಬ್ಬಂಟಿ ಪಾದಚಾರಿಗಳು ಹಾಗೂ ಕಸ ಸುರಿಯುವ ಸ್ಥಳಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ ವಲಯಗಳಲ್ಲಿ ಅತ್ಯಧಿಕ ನಾಯಿ ಕಡಿತ ಪ್ರಕರಣಗಳು ಕಂಡುಬಂದಿವೆ. ಕಳೆದ ಜ.1ರಿಂದ ಆ.31ರವರೆಗೆ ಒಟ್ಟು 10,500ಕ್ಕೂ ಅಧಿಕ ನಾಯಿ ಕಡಿತ ಪ್ರಕರಣ ವರದಿಯಾಗಿವೆ.