ಬದಿಯಡ್ಕ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಸೆ. 22 ರಂದು ಗುರುವಾರ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಕಾವ್ಯಕಮ್ಮಟವನ್ನು ಎಡನೀರು ಮಠದಲ್ಲಿ ಹಮ್ಮಿಕೊಂಡಿದೆ. ರಾಷ್ಟ್ರಮಟ್ಟದಿಂದ ಆಗಮಸುವ ಸುಮಾರು ಅರವತ್ತು ಮಂದಿ ಶಿಬಿರಾರ್ಥಿಗಳಿರುವ ಈ ಕಮ್ಮಟದ ನಿರ್ದೇಶಕರಾಗಿ ಹಿರಿಯ ಕವಿ ಡಾ. ವಸಂತಕುಮಾರ ಪೆರ್ಲ ಅವರು ಕಾರ್ಯ ನಿರ್ವಹಿಸುವರು.
ಗುರುವಾರ ಬೆಳಗ್ಗೆ ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತಿ ಅವರ ಸಾನ್ನಿಧ್ಯದಲ್ಲಿ ಹಿರಿಯ ಕವಯಿತ್ರಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಅವರು ಕಮ್ಮಟವನ್ನು ಉದ್ಘಾಟಿಸಲಿದ್ದು ಹಿರಿಯ ಕವಿ ಡಾ. ರಮಾನಂದ ಬನಾರಿ ಮತ್ತು ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮುಖ್ಯ ಅತಿಥಿಗಳಾಗಿರುವರು. ಅನುವಾದಕ ಪಿ. ಎನ್ ಮೂಡಿತ್ತಾಯ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್., ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಅವರ ಉಪಸ್ಥಿತಿ ಇರುವುದು. ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು.
ಮೂರು ದಿನಗಳ ಕಾಲ ನಡೆಯುವ ಕಮ್ಮಟದಲ್ಲಿ ಡಾ. ಯು. ಮಹೇಶ್ವರಿ, ಡಾ. ವಸಂತಕುಮಾರ ಪೆರ್ಲ, ಬಿ. ಆರ್. ಸೂರಜ್, ಸರಸ್ವತಿ ಚಿಮ್ಮಲಗಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಧನಂಜಯ ಕುಂಬಳೆ, ನಾಗರಾಜ ತಲಕಾಡು, ಸುಬ್ಬು ಹೊಲೆಯಾರ್, ಡಾ. ಎಚ್. ಎಂ. ಚೆನ್ನಪ್ಪಗೋಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಶನಿವಾರದಂದು ಮಧ್ಯಾಹ್ನ ನಡೆಯುವ ಕವಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ. ಆರ್. ಲಕ್ಷ್ಮಣ ರಾವ್ ಭಾಗವಹಿಸುವರು. ಮೂರು ದಿನಗಳ ಕಾಲವೂ ಗಂಪು ಚರ್ಚೆ, ಕಾವ್ಯರಚನೆ, ಕವಿಗೋಷ್ಠಿ ಮೊದಲಾದ ಕಾರ್ಯಕ್ರಮ ಇರುವುದು. ಶುಕ್ರವಾರ ಸಂಜೆ ಪದ್ಯಾಣ ಗಣಪತಿ ಭಟ್ ಮತ್ತು ಮುಳಿಯ ಶಂಕರ ಭಟ್ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಅಪರಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯವಿದ್ದು, ಕವಿ ಬಿ. ಆರ್. ಲಕ್ಷ್ಮಣರಾವ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಸುಬ್ಬು ಹೊಲೆಯಾರ್ ಮುಖ್ಯ ಅತಿಥಿಯಾಗಿದ್ದು, ಡಾ. ವಸಂತಕುಮಾರ ಪೆರ್ಲ ಕಮ್ಮಟದ ಫಲಶೃತಿ ಬಗ್ಗೆ ಮಾತಾಡುವರು. ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಪಿ. ಎನ್. ಮೂಡಿತ್ತಾಯ, ಅಕಾಡೆಮಿಯ ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಅವರ ಉಪಸ್ಥಿತಿಯಿದ್ದು ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು.
ಎಡನೀರಿನಲ್ಲಿ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಕಾವ್ಯಕಮ್ಮಟ ಗುರುವಾರದಿಂದ
0
ಸೆಪ್ಟೆಂಬರ್ 19, 2022