ನವದೆಹಲಿ: ಅಗ್ನಿಪಥ್ ಯೋಜನೆ ಬಗೆಗಿನ ವಿವರಗಳನ್ನು ಬಹಿರಂಗಪಡಿಸಲು ರಕ್ಷಣಾ ಸಚಿವಾಲಯ ನಿರಾಕರಿಸಿದೆ. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ್ದ ಅರ್ಜಿಗೆ ಉತ್ತರಿಸಲು ಸಚಿವಾಲಯ ನಿರಾಕರಿಸಿದ್ದು, ಇದನ್ನು "ರಹಸ್ಯ" ಎಂದು ಪಟ್ಟಿ ಮಾಡಲಾಗಿದೆ.
ಪುಣೆ ಮೂಲದ ಆರ್‍ಟಿಐ ಕಾರ್ಯಕರ್ತ ವಿಹಾರ್ ದ್ರುವೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಾಹಿತಿ ನೀಡಲು ನಿರಾಕರಿಸಿರುವ ಕ್ರಮ, "ಪಾರದರ್ಶಕ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಅಡಿಯಲ್ಲಿ ಇದು ಸೇರಿಲ್ಲ" ಎಂದು ತಜ್ಞರು ಹೇಳಿದ್ದಾರೆ. ಸೆಕ್ಷನ್ 8 ಮತ್ತು 9ರಲ್ಲಿ ಮಾಹಿತಿಯನ್ನು ನಿರಾಕರಿಸಲಾಗದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2022ರ ಜುಲೈ 14ರಂದು ಹೇಳಿಕೆ ನೀಡಿದಂತೆ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯಡಿ 46 ಸಾವಿರ ಸಿಬ್ಬಂದಿಯನ್ನು 2022ರ ಡಿಸೆಂಬರ್ ಹಾಗೂ 2023ರ ಫೆಬ್ರುವರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ನಾಲ್ಕನೇ ಒಂದರಷ್ಟು ಮಂದಿ ಅಗ್ನಿವೀರರು ಮಾಸಿಕ 30 ಸಾವಿರ ವೇತನವನ್ನು ಮೊದಲ ವರ್ಷ ಪಡೆಯಲಿದ್ದಾರೆ ಹಾಗೂ ನಾಲ್ಕನೇ ವರ್ಷ 40 ಸಾವಿರ ವೇತನ ಪಡೆಯಲಿದ್ದರೆ. ಇವರನ್ನು ಸೇನಾ ಪಡೆಗೆ ಕಾಯಂ ಆಗಿ ನೇಮಕ ಮಾಡುವ ಸಾಧ್ಯತೆ ಇರುತ್ತದೆ. ನಾಲ್ಕು ವರ್ಷದ ಗುತ್ತಿಗೆಯ ಕೊನೆಗೆ ಅಗ್ನಿವೀರರಿಗೆ 11 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ ಹಾಗೂ ಇದು ಅಗ್ನಿವೀರರಿಗೆ ಸ್ವ ಉದ್ಯೋಗದ ದಾರಿ ಕಂಡುಕೊಳ್ಳಲು ಅಥವಾ ಉನ್ನತ ಶಿಕ್ಷಣ ನಡೆಸಲು ಅನುಕೂಲ ಎನ್ನುವುದು ಸರ್ಕಾರದ ಸಮರ್ಥನೆ. ಕೇಂದ್ರೀಯ ಅರೆಮಿಲಿಟರಿ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್, ಅಗ್ನಿವೀರರಿಗೆ ಶೇಕಡ 10ರಷ್ಟು ನೇಮಕಾತಿ ಅವಕಾಶಗಳ ಭರವಸೆ ನೀಡಿವೆ.
ಹಾಲಿ ಇರುವ ನೇಮಕಾತಿ ಯೋಜನೆಯ ಬದಲಾಗಿ ಅಗ್ನಿವೀರ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ನಡೆದ ಅಂತರ್ ಸಚಿವಾಲಯ ಚರ್ಚೆಗಳು ಮತ್ತು ಹೊಸ ಯೋಜನೆ ಆರಂಭಿಸಲು ಕಾರಣಗಳನ್ನು ಪ್ರಶ್ನಿಸಿ 2022ರ ಜುಲೈ 23ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಧ್ರುವೆ ಅರ್ಜಿ ಸಲ್ಲಿಸಿದ್ದರು. ವೇತನ ಶ್ರೇಣಿ ಮತ್ತು ಭತ್ಯೆ ಬಗೆಗೆ ನಡೆದ ಚರ್ಚೆ ಬಗ್ಗೆ ಮಾಹಿತಿ ಕೋರಲಾಗಿತ್ತು ಎಂದು hindustantimes.com ವರದಿ ಮಾಡಿದೆ.