ನವದೆಹಲಿ: ಇನ್ಮುಂದೆ ಸಂಸತ್ತಿನಲ್ಲಿ 'ಸರ್' ಎಂಬ ಪದಕ್ಕೆ ಫುಲ್ಸ್ಟಾಪ್ ಬೀಳಲಿದೆ. ಏಕೆಂದರೆ ಈ ಶಬ್ದದ ಬಳಕೆಯನ್ನು ಕೈಬಿಡುವಂತೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮನವಿ ಮಾಡಿದ್ದು, ಅದಕ್ಕೆ ಅನುಮೋದನೆ ಸಿಕ್ಕಿದೆ.
'ಸರ್' ಪದದ ಬದಲು ಲಿಂಗ ತಟಸ್ಥ ಪದ ಬಳಸಲು ನಿರ್ಧರಿಸಲಾಗಿದೆ.
ಸಂಸತ್ತಿನ ಪ್ರಶ್ನೋತ್ತರ ಸಮಯದಲ್ಲಿ 'ಸರ್, 'ನೋ ಸರ್' ಬಳಕೆ ಹೆಚ್ಚಾಗುತ್ತಿದೆ. ಸಂಸತ್ತಿನಲ್ಲಿ ಮಹಿಳೆಯರು ಇದ್ದರೂ ಇದೇ ಪದದ ಬಳಕೆ ಹೆಚ್ಚಿರುವುದು ಲಿಂಗ ತಾರತಮ್ಯವನ್ನು ತೋರಿಸುತ್ತಿದೆ ಎಂದು ಪ್ರಿಯಾಂಕಾ ಅವರು, ಕಳೆದ ತಿಂಗಳ ಆಗಸ್ಟ್ 8 ರಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.
'ಪ್ರಜಾಪ್ರಭುತ್ವದ ದೇಗುಲವೆಂಬ ಸಂಸತ್ತಿನಲ್ಲಿ ಸಂಸದೆಯಾಗಿ ಲಿಂಗ ಬೇಧವಿಲ್ಲದ ಪದ ಬಳಸಬೇಕೆಂದು ನಾನು ಮನವಿ ಮಾಡುತ್ತೇನೆ. ಇದು ಒಂದು ಸಣ್ಣ ಬದಲಾವಣೆಯಂತೆ ತೋರುತ್ತದೆಯಾದರೂ, ಸಂಸತ್ತಿನ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ತಮ್ಮ ಪ್ರಾತಿನಿಧ್ಯವನ್ನು ನೀಡುವಲ್ಲಿ ಇದು ದೂರದೃಷ್ಟಿಯನ್ನು ಹೊಂದಿದೆ' ಎಂದು ಪತ್ರದಲ್ಲಿ ಸಂಸದೆ ಹೇಳಿದ್ದರು.
'ಸದನದ ಎಲ್ಲಾ ಪ್ರಕ್ರಿಯೆಗಳನ್ನು (ಸಂಸದೀಯ ಪ್ರಶ್ನೆಗಳಿಗೆ ಉತ್ತರಗಳನ್ನು ಸೇರಿದಂತೆ) ಸಭಾಧ್ಯಕ್ಷರಿಗೆ ತಿಳಿಸಲಾಗುತ್ತದೆ. ಆದರೂ ರಾಜ್ಯಸಭೆಯ ಮುಂದಿನ ಅಧಿವೇಶನದಿಂದ ಲಿಂಗ-ತಟಸ್ಥ ಉತ್ತರಗಳನ್ನು ಒದಗಿಸಲು ಸಚಿವಾಲಯಗಳಿಗೆ ತಿಳಿಸಲಾಗುವುದು ಎಂದು ಸಂಸದೆಗೆ ಬಂದಿರುವ ಪ್ರತ್ಯುತ್ತರದಲ್ಲಿ ತಿಳಿಸಲಾಗಿದೆ.
ಈ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಂಸದೆ ಪ್ರಿಯಾಂಕಾ, 'ಸಣ್ಣ ಹೆಜ್ಜೆ, ದೊಡ್ಡ ಬದಲಾವಣೆ ತರುತ್ತದೆ. ಮಹಿಳಾ ಸಂಸದರಿಗೆ ಸಚಿವಾಲಯಗಳಿಂದ ಸಂಸತ್ತಿನ ಪ್ರಶ್ನೆಯ ಪ್ರತಿಕ್ರಿಯೆಗಳಲ್ಲಿ ಅಸಹಜತೆಯನ್ನು ಸರಿಪಡಿಸಿದ್ದಕ್ಕಾಗಿ ರಾಜ್ಯಸಭಾ ಸಚಿವಾಲಯಕ್ಕೆ ಧನ್ಯವಾದಗಳು. ಇನ್ನು ಮುಂದೆ ಸಚಿವಾಲಯಗಳಿಂದ ಲಿಂಗ ತಟಸ್ಥ ಪ್ರತ್ಯುತ್ತರಗಳು ಇರುತ್ತವೆ' ಎಂದು ಅವರು ತಮ್ಮ ಪತ್ರದ ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದಾರೆ.