ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಯ ಕುರಿತು ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಶ್ರೀಕೃಷ್ಣ ಅವರು ನೀಡಿದ ಸಂದರ್ಶನದ ಭಾಗವನ್ನು ಉಲ್ಲೇಖಿಸಿ ಮಾಡಲಾಗಿರುವ ಟ್ವೀಟ್‌ಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಿಜಿಜು, 'ಜನರಿಂದ ಆಯ್ಕೆಯಾದ ಪ‍್ರಧಾನ ಮಂತ್ರಿಯವರನ್ನು ಯಾವುದೇ ನಿರ್ಬಂಧವಿಲ್ಲದೇ ನಿಂದಿಸುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳ ಬಗ್ಗೆ ಅವರು ಯಾವತ್ತೂ ಮಾತನಾಡುವುದಿಲ್ಲ' ಎಂದು ಹೇಳಿದ್ದಾರೆ.
ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, 'ಇವತ್ತಿನ ಪರಿಸ್ಥಿತಿ ಕೆಟ್ಟದಾಗಿದೆ. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿಂತು ಪ್ರಧಾನಿಯವರ ಮುಖವನ್ನು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರೆ, ನನ್ನ ಮೇಲೆ ದಾಳಿಯಾಗಬಹುದು. ನನ್ನನ್ನು ಬಂಧಿಸಬಹುದು. ಯಾವುದಾದರೂ ಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಬಹುದು. ಇದನ್ನು ನಾಗರಿಕರಾದ ನಾವೆಲ್ಲರೂ ವಿರೋಧಿಸುತ್ತೇವೆ' ಎಂದು ಹೇಳಿದ್ದಾರೆ.
'ಈ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೇಳಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ, ಅವರ ಹೇಳಿಕೆ ಅವರು ಸೇವೆ ಸಲ್ಲಿಸಿದ ಸಂಸ್ಥೆಯನ್ನೇ ಅವಮಾನಿಸುವಂತಿದೆ' ಎಂದು ಯಾರ ಹೆಸರನ್ನೂ ಉಲ್ಲೇಖಿಸಿದೆ ರಿಜಿಜು ತಿಳಿಸಿದ್ದಾರೆ.
Well said
ಪ್ರತ್ಯುತ್ತರಅಳಿಸಿ