ನವದೆಹಲಿ: ಭದ್ರತಾ ಸಿಬ್ಬಂದಿಗಳ ಕರ್ತವ್ಯದ ಅವಧಿಯಲ್ಲಿ ಚಹಾ, ತಿಂಡಿ ತರಲು ಬಳಸಿಕೊಳ್ಳುವಂತಿಲ್ಲ ಎಂದು ಏಮ್ಸ್ ಮಹತ್ವದ ಆದೇಶ ಮಾಡಿದೆ.
ಕೆಲಸದ ಅವಧಿಯಲ್ಲಿ ವೈದ್ಯರು ಅಥವಾ ಇತರೆ ಸಿಬ್ಬಂದಿಗೆ ಚಹಾ ಮತ್ತು ಉಪಹಾರಗಳನ್ನು ತರದಂತೆ ಭದ್ರತಾ ಸಿಬ್ಬಂದಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಹೇಳಿದೆ. ಎಐಐಎಂಎಸ್‌ನ ನೂತನ ನಿರ್ದೇಶಕ ಎಂ ಶ್ರೀನಿವಾಸ್ ಗುರುವಾರ ಹಿರಿಯ ಸಿಬ್ಬಂದಿಯ ವಿರುದ್ಧ ತೀವ್ರ ನಿಲುವು ತಳೆದಿದ್ದು, ಭದ್ರತಾ ಸಿಬ್ಬಂದಿಯನ್ನು ಅವರನ್ನು ನೇಮಕ ಮಾಡಿಕೊಂಡಿರುವ ಉದ್ದೇಶಕ್ಕೆ ಮಾತ್ರ ತೊಡಗಿಸಿಕೊಳ್ಳಬೇಕು ಮತ್ತು ಕೆಲಸದ ವೇಳೆಯಲ್ಲಿ ಚಹಾ ಮತ್ತು ತಿಂಡಿ ತರುವಂತೆ ಕೇಳುವ ಅಭ್ಯಾಸವನ್ನು ಬಿಡುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಯಾವುದೇ ಭದ್ರತಾ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಉಪಹಾರ ಸೇವಿಸುವುದು ಕಂಡುಬಂದರೆ ಅವರನ್ನು ಏಮ್ಸ್ ನ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಕಾರ್ಡಿಯೋಥೊರಾಸಿಕ್ ಮತ್ತು ನ್ಯೂರೋಸೈನ್ಸ್ ಸೆಂಟರ್‌ಗೆ ಭೇಟಿ ನೀಡಿದ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಆದೇಶದ ಮೇರೆಗೆ ಭದ್ರತಾ ಸಿಬ್ಬಂದಿಯೊಬ್ಬರು ಟ್ರೇನಲ್ಲಿ ಚಹಾವನ್ನು ಒಯ್ಯುತ್ತಿರುವುದನ್ನು ನಿರ್ದೇಶಕರು ಗಮನಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಅವರು, “ಇಂತಹ ಘಟನೆಗಳು ಸಿಬ್ಬಂದಿಯನ್ನು ನಿಯೋಜಿಸಿದ ಭದ್ರತೆಗೆ ರಾಜಿ ಮಾಡಿಕೊಳ್ಳುವುದಲ್ಲದೆ, ಭದ್ರತಾ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕ ಮೂಲದ ವೈದ್ಯ ಡಾ.ಶ್ರೀನಿವಾಸ್ ಅವರು ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅತ್ಯಂತ ಹಿಂದೂಳಿದ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಯಲ್ಲಿ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ ಯಾದಗಿರಿ ಮೂಲದ ಕನ್ನಡಿಗ ವೈದ್ಯ, ಮಕ್ಕಳ ತಜ್ಞ ಡಾ. ಎಂ. ಶ್ರೀನಿವಾಸ್ ಅವರನ್ನು ಕೇಂದ್ರ ಸರ್ಕಾರ ಈ ಹುದ್ದೆಗೆ ಆಯ್ಕೆ ಮಾಡಿತ್ತು.